ಭಾಗಮಂಡಲ, ಜು. ೨೨: ಕಾಪಿ,ü ಕಿತ್ತಳೆಗೆ ಹೆಸರಾದ ಕೊಡಗು ಜೇನಿಗೂ ಪ್ರಸಿದ್ಧಿ ಪಡೆದಿದೆ. ಔಷಧೀಯ ಗುಣಗಳಿಂದಾಗಿ ಕೊಡಗಿನ ಜೇನು ರಾಷ್ಟçಮಟ್ಟದಲ್ಲಿ ಹೆಸರು ಪಡೆದಿದೆ. ಮಡಿಕೇರಿ ತಾಲೂಕಿನ ತಲಕಾವೇರಿ, ಚೇರಂಗಾಲ, ಸಣ್ಣಪುಲಿಕೋಟು ವ್ಯಾಪ್ತಿಯಲ್ಲಿ ಉತ್ಪಾದಿಸುತ್ತಿರುವ ಜೇನು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆೆ. ಜಿಲ್ಲೆಯ ಇತರ ಭಾಗಗಳಲ್ಲೂ ಜೇನು ಕೃಷಿ ಮಾಡಲಾಗುತ್ತಿದೆಯಾದರೂ ಭಾಗಮಂಡಲದ ಜೇನಿಗೆ ಅದರದ್ದೇ ಆದ ಮಹತ್ವವಿದೆ.

ತಲಕಾವೇರಿಯ ಜೇನು ಕೃಷಿಕ ಸಿರಕಜೆ ಮಾದಪ್ಪ ಜೇನು ಕೃಷಿಯಲ್ಲಿ ಸುಮಾರು ೬೦ ವರ್ಷಗಳ ಅನುಭವ ಹೊಂದಿದವರು. ಜೇನು ಕೃಷಿಕರ ಸಂಘದಿAದ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ. ಈಗ ಅವರ ಮಗ ಲೋಕಪ್ರಕಾಶ್ ಸಹ ಜೇನು ಕೃಷಿಯಲ್ಲಿ ತಂದೆಯೊAದಿಗೆ ಕೈಜೋಡಿಸುತ್ತಿದ್ದಾರೆ. ಭಾಗಮಂಡಲ ವ್ಯಾಪ್ತಿಯಲ್ಲಿ ಜೇನು ಕೃಷಿಯಲ್ಲಿ ಉತ್ತಮ ಆದಾಯ ಲಭಿಸುತ್ತಿದೆ. ಈ ವರ್ಷ ಈ ಕುಟುಂಬ ೮೦೦ ಕೆ.ಜಿ. ಜೇನು ಉತ್ಪಾದಿಸಿದೆ. ಕಳೆದ ವರ್ಷ ೧೨೦೦ ಕೆ.ಜಿ. ಜೇನು ಉತ್ಪಾದನೆಯಾಗಿತ್ತು. ಜೇನು ಉತ್ಪಾದನೆಯು ಮಳೆ ಹಾಗೂ ಹೂ ಬಿಡುವ ಮರಗಳನ್ನು ಅವಲಂಬಿಸಿದೆ. ಬೇಸಿಗೆಯಲ್ಲಿ ನಡುನಡುವೆ ಮಳೆಸುರಿದಿದ್ದರಿಂದ ಈ ವರ್ಷ ಉತ್ಪಾದನೆ ಕುಂಠಿತವಾಯಿತು ಎನ್ನುತ್ತಾರೆ ಅವರು. ಇವರು ನಾಪೋಕ್ಲು ವ್ಯಾಪ್ತಿಯಲ್ಲೂ ಜೇನು ಕೃಷಿ ಕೈಗೊಳ್ಳುತ್ತಿದ್ದಾರೆ. ಆದರೆ ನಾಪೋಕ್ಲು ಭಾಗದ ಹಾಗೂ ಭಾಗಮಂಡಲ ಭಾಗದ ಜೇನಿನಲ್ಲಿ ವ್ಯತ್ಯಾಸವಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೇನು ಉತ್ಪಾದನೆಯಾಗುತ್ತದೆ. ೯ರಿಂದ ೧೫ ದಿನಗಳ ಒಳಗೆ ಒಂದು ಪೆÀಟ್ಟಿಗೆಯಿಂದ ಜೇನು ತೆಗೆಯ ಬಹುದಾಗಿದೆ. ಜೇನು ಕೃಷಿಗಾಗಿ ತೋಟದಲ್ಲಿನ ಹೂವಿನ ಮರಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಈ ಹಿಂದೆ ಜೇನಿಗೆ ಥಾಯ್‌ಸ್ಯಾಕ್ ಬ್ರೂಡ್ ಕಾಯಿಲೆ ತಗುಲಿ ಉತ್ಪಾದನೆ ಇಳಿಮುಖಗೊಂಡಿತ್ತು. ಕಾಯಿಲೆಯಿಂದಾಗಿ ಜೇನು ಉತ್ಪಾದಕರು ನಿರಾಶರಾಗುವುದು ಬೇಡ. ಆರೈಕೆ ಮಾಡುತ್ತಲಿದ್ದರೆ ಜೇನು ಹುಳಗಳ ಪುನರುತ್ಪತ್ತಿ ಮಾಡಬಹುದು. ಜೇನುಹುಳಗಳೊಂದಿಗೆ ನಿರಂತರ ಸಂಪರ್ಕ ಇದ್ದಲ್ಲಿ ಜೇನು ಕೃಷಿ ಕೈಹಿಡಿಯುತ್ತದೆ ಎಂದು ಇತರ ಕೃಷಿಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಸಮೀಪದ ಕರಿಕೆಗೂ ಇವರು ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಿ ಜೇನು ಉತ್ಪಾದನೆ ಮಾಡುತ್ತಾರೆ. ಇಲ್ಲಿ ರಬ್ಬರ್ ಅವಧಿಯಲ್ಲಿ ಜೇನು ಉತ್ಪಾದನೆಯಾಗುತ್ತದೆ. ಮಾದಪ್ಪ ಅವರ ಬಳಿ ೩೦೦ಕ್ಕೂ ಅಧಿಕ ಜೇನು ಪೆಟ್ಟಿಗೆಗಳಿವೆ. ನೇರವಾಗಿ ಗ್ರಾಹಕರಿಗೆ ಮಾರಿದರೆ ಉತ್ತಮ ದರ ಲಭಿಸುತ್ತದೆ ಎನ್ನುವ ಮಾದಪ್ಪ ಅವರಿಗೆ ಅವರದ್ದೇ ಆದ ಗ್ರಾಹಕ ವರ್ಗವಿದೆ. ನೇರವಾಗಿ ಖರೀದಿಸುವವರಲ್ಲದೆ ಅಂಚೆ ಮೂಲಕ ಖರೀದಿಸುವವರಿಗೆ ಪಾರ್ಸಲ್ ಮೂಲಕ ಕಳುಹಿಸುತ್ತಾರೆ. ಈ ವರ್ಷ ಲಾಕ್‌ಡೌನ್‌ನಿಂದಾಗಿ ಗ್ರಾಹಕರು ಬಾರದೆ ಉತ್ಪಾದಿಸಿದ ಜೇನು ಸಂಪೂರ್ಣ ಮಾರಾಟ ಆಗಿಲ್ಲ.

ಸಣ್ಣಪುಲಿಕೋಟು ಗ್ರಾಮದ ಆಡಿಕೋಡ್ ಅನಿಲ್ ಸಹ ಜೇನು ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಬಳಿ ೧೨೦ ಜೇನುಪೆಟ್ಟಿಗೆಗಳಿವೆ. ಈ ವರ್ಷ ಅವರಿಗೆ ಈ ಭಾಗದಲ್ಲಿ ಅಧಿಕ ಜೇನು ಉತ್ಪಾದನೆಯಾಗಿದೆ. ಮಳೆ ಪ್ರಮಾಣ ಕಡಿಮೆ ಇದ್ದುದರಿಂದ ಹೆಚ್ಚು ಜೇನು ಉತ್ಪಾದನೆಯಾಗಿದೆ. ಕೆನ್ನಾಯಿಗಳ ಹಾವಳಿಯಿಂದ ಹಲವು ರೈತರ ಜೇನು ಕೃಷಿಗೆ ತೊಂದರೆಯಾಗುತ್ತಿದೆ ಎಂಬುದು ಅನಿಲ್ ಅವರ ಅಭಿಪ್ರಾಯ.

ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ೨ ರಿಂದ ೫೦೦ ಜೇನುಪೆಟ್ಟಿಗೆಗಳನ್ನು ಹೊಂದಿರುವ ಸುಮಾರು ೨,೫೦೦ ಕ್ಕೂ ಅಧಿಕ ಜೇನು ಬೆಳೆಗಾರರು ಇದ್ದಾರೆ .ಒಂದು ಪೆಟ್ಟಿಗೆಯಲ್ಲಿ ಸರಾಸರಿ ೫ ಕೆ.ಜಿ. ಜೇನು ಉತ್ಪಾದನೆಯಾಗುತ್ತದೆ. ಈ ಭಾಗದಲ್ಲಿ ಆಯುರ್ವೇದ ಸಸ್ಯ ಸಂಪನ್ಮೂಲದಿAದ ಜೇನು ಉತ್ಪಾದನೆಯಾಗುತ್ತಿದ್ದು ಉತ್ಕೃಷ್ಟ ಜೇನು ಬೇರೆಲ್ಲೂ ಲಭಿಸದು ಎನ್ನುತ್ತಾರೆ ಭಾಗಮಂಡಲದ ಜೇನು ಕೃಷಿ ತಾಂತ್ರಿಕ ತರಬೇತಿ ಕೇಂದ್ರದ ಜೇನು ಕೃಷಿ ಪ್ರದರ್ಶಕ ವಸಂತ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಜೇನು ಕೃಷಿ ತರಬೇತಿ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಇಲಾಖೆ ವತಿಯಿಂದ ಸೀಮಿತ ಜನರಿಗೆ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಲಾಕ್‌ಡೌನ್ ಬಳಿಕ ಜೇನು ಕೃಷಿಕರ ಸಂಖ್ಯೆ ಹೆಚ್ಚಿದೆ. ಪಟ್ಟಣದಿಂದ ಹಳ್ಳಿಗೆ ಹಿಂತಿರುಗಿದವರು ಉಪಕಸುಬಾಗಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿ ದ್ದಾರೆ ಎಂದರು. ಒಟ್ಟಿನಲ್ಲಿ ಜೇನು ಕೃಷಿಯಿಂದ ಬದುಕು ರೂಪಿಸುತ್ತಿರುವವರ ಬಾಳು ಸಿಹಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

-ಸುನಿಲ್ ಕುಯ್ಯಮುಡಿ