ಸುಂಟಿಕೊಪ್ಪ, ಜು. ೨೦: ಪ್ರಸಕ್ತ ಸಾಲಿನಲ್ಲಿ ಆಶಾದಾಯಕ ಮುಂಗಾರು ಮಳೆಯಿಂದ ಕೃಷಿಕರು ಹೆಚ್ಚಿನ ಉತ್ಸಾಹದೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜೂನ್ ತಿಂಗಳಿನಲ್ಲಿ ಆರ್ದ್ರಾ ಮಳೆ ಕೈಕೊಟ್ಟಿದ್ದರಿಂದ ರೈತರಿಗೆ ಗದ್ದೆ ಉಳುಮೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಆದರೆ ಜುಲೈನಲ್ಲಿ ಪುನರ್ವಸು ಮಳೆಯ ಆರ್ಭಟದಿಂದ ಉತ್ತಮ ಮಳೆಯಾಗಿದ್ದು ಹೊಳೆ, ತೋಡು, ನಾಲೆ, ಝರಿಗಳು ತುಂಬಿ ಹರಿದು ಗದ್ದೆಗಳಲ್ಲೂ ನೀರು ತುಂಬಿರುವುದರಿAದ ರೈತರು ಗದ್ದೆ ಉಳುಮೆ ಮಾಡಿ ಭತ್ತದ ಬೀಜ ಹಾಕಲು ಸಹಕಾರಿಯಾಗಿದೆ. ಮೊದಲೇ ಬೀಜ ಹಾಕಿದ ರೈತರಿಗೆ ಸಸಿಮಡಿ ಬೆಳೆದಿದ್ದರಿಂದ ಈಗ ಗದ್ದೆಯನ್ನು ಹದಮಾಡಿ ನಾಟಿ ಮಾಡಲು ಅನುಕೂಲವಾಗಿದೆ.

ಗದ್ದೆಹಳ್ಳ ನಿವಾಸಿ ಪ್ರಗತಿಪರ ಕೃಷಿಕ ಪಟ್ಟೆಮನೆ ಉದಯಕುಮಾರ್, ಪ್ರಸನ್ನ, ಮಧು, ಸದಾಶಿವ ಅವರುಗಳ ಐದೂವರೆ ಎಕರೆ ಗದ್ದೆಯಲ್ಲಿ ಕೃಷಿಕರು ನಾಟಿ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬಂತು.

ಕೊಡಗರಹಳ್ಳಿ, ಕಂಬಿಬಾಣೆ, ಹೇರೂರು, ಹರದೂರು, ಹಾರ್‌ಬೈಲ್, ಕೆದಕಲ್, ಹೊರೂರು, ಹಾಲೇರಿ, ಕಾಂಡನಕೊಲ್ಲಿ ಮೊದಲಾದ ಗ್ರಾಮದಲ್ಲೂ ಬಿರುಸಿನಿಂದ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ.