ಮುಳ್ಳೂರು : ಹತ್ತನೇ ತರಗತಿ ಪರೀಕ್ಷೆಯ ಮೊದಲ ದಿನದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೆ ಗೊಂದಲ, ತಳಮಳ ಇಲ್ಲದೆ ಬರೆದರು. ಶನಿವಾರಸಂತೆಯಲ್ಲಿ ಭಾರತಿ ವಿದ್ಯಾಸಂಸ್ಥೆ ಮತ್ತು ಪವಿತ್ರ ಹೃದಯ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಶನಿವಾರಸಂತೆ ಪಟ್ಟಣದಲ್ಲಿರುವ ವಿವಿಧ ೬ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಸೇರಿದಂತೆ ಹಂಡ್ಲಿ, ಗೌಡಳ್ಳಿ, ನಿಡ್ತ, ಆಲೂರುಸಿದ್ದಾಪುರ ಪ್ರೌಢಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಶನಿವಾರಸಂತೆಯಲ್ಲಿ ೨ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಮುಂಜಾಗೃತೆ ಕ್ರಮವಾಗಿ ಪರೀಕ್ಷೆಯಲು ಬಂದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಹಾಯಕ ಅಧಿಕಾರಿ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರನ್ನು ನಿಯೋಜಿಸಲಾಗಿತು. ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಗಮಿಸುತ್ತಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಭಯ, ಗೊಂದಲ ಪಡದೆ, ಪರೀಕ್ಷೆ ಬರೆಯುವಂತೆ ಧ್ವನಿವರ್ಧಕದಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತಿತ್ತು. ಅದರಂತೆ ಪರೀಕ್ಷೆ ಬರೆದು ಮನೆಗೆ ಹಿಂತಿರುಗುವ ಸಂದರ್ಭ ಬಿಸ್ಕೆಟ್ ವಿತರಿಸಲಾಯಿತು.

ಪರೀಕ್ಷೆ ಬರೆಯಲು ಬಹಳಷ್ಟು ವಿದ್ಯಾರ್ಥಿಗಳು ಪೋಷಕರೊಂದಿಗೆ ಸ್ವಂತ ವಾಹನದಲ್ಲಿ ಬಂದರೆ ಗ್ರಾಮೀಣ ಪ್ರದೇಶದ ಬಹಳಷ್ಟು ಬಡ ಕೂಲಿ ಕಾರ್ಮಿಕರ ಮಕ್ಕಳು ಮನೆಯಲ್ಲಿ ಸ್ವಂತ ಯಾವುದೆ ವಾಹನದ ವ್ಯವಸ್ಥೆ ಇಲ್ಲದ ಕಾರಣ ಬಾಡಿಗೆ ಆಟೋ ಮತ್ತು ಟ್ಯಾಕ್ಸಿ ಮೂಲಕ ಪರೀಕ್ಷೆ ಬರೆಯಲು ಬಂದಿದ್ದರು. ಕೆಲವು ವಿದ್ಯಾರ್ಥಿಗಳು ಪೋಷಕರೊಂದಿಗೆ ದ್ವಿಚಕ್ರ ವಾಹನದ ಮೂಲಕ ಮಳೆಯಲ್ಲಿ ನೆನೆದುಕೊಂಡು ಪರೀಕ್ಷೆ ಬರೆಯಲು ಬಂದಿದ್ದರು. ಸೋಮವಾರ ಎಲ್ಲೆಡೆ ವ್ಯಾಪಾಕವಾಗಿ ಮಳೆಯಾಗುತಿತ್ತು, ಖಾಸಗಿ ಬಸ್ ಓಡಾಟ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಸರಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರಸ್ತೆ ಸಾರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದೆಂದು ಆಶ್ವಾಸನೆ ನೀಡಿತ್ತು ಆದರೆ ವ್ಯವಸ್ಥೆ ಮಾಡಿಕೊಟ್ಟಿಲ್ಲ ಎಂದು ಗ್ರಾಮೀಣ ಭಾಗದ ಕೆಲವು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.