ಸೋಮವಾರಪೇಟೆ : ಪಟ್ಟಣ ವ್ಯಾಪ್ತಿಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇಲ್ಲಿನ ಓಎಲ್‌ವಿ ಆಂಗ್ಲಮಾಧ್ಯಮ ಶಾಲೆ ಹಾಗೂ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕರು, ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಸಲಹೆಯಿತ್ತರು.
ಕೊರೊನಾ ಹಿನ್ನೆಲೆ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಕೊಠಡಿಗಳ ವ್ಯವಸ್ಥೆಯನ್ನು ರಂಜನ್ ಪರಿಶೀಲಿಸಿದರು. ಕೊರೊನಾ ಆತಂಕದ ನಡುವೆಯೂ ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯ ಬಿಟ್ಟು ಪರೀಕ್ಷೆ ಎದುರಿಸಿ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು-ಆರೋಗ್ಯ ಇಲಾಖಾ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದರು. ಥರ್ಮಲ್ ಸ್ಕಾö್ಯನಿಂಗ್ ನಂತರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಕಲ್ಪಿಸಿದರು. ಶಿಕ್ಷಣ ಇಲಾಖಾ ಸಿಬ್ಬಂದಿಗಳೊAದಿಗೆ ಕಂದಾಯ, ತಾಲೂಕು ಪಂಚಾಯಿತಿ, ಸ್ಕೌಟ್ ಮತ್ತು ಗೈಡ್ಸ್, ಪೊಲೀಸ್ ಸಿಬ್ಬಂದಿಗಳು ಸಹಕಾರ ನೀಡಿದರು.
ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿದ್ದು, ಒಂದು ಕೊಠಡಿಯಲ್ಲಿ ೧೨ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತಾಲೂಕಿನ ೧೭ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೫೯೮ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ತಾಲೂಕಿನಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಗಿದೆ. ಖಾಸಗಿ ವಿದ್ಯಾರ್ಥಿಗಳಿಗೆ ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಮಾಹಿತಿ ನೀಡಿದರು.
ಕೊರೊನಾ ಪಾಸಿಟಿವ್ ಬಂದು ಹೋಂ ಐಸೋಲೇಷನ್‌ನಲ್ಲಿರುವ ೪ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳೊಂದಿಗೆ ಯಾವುದೇ ಭಯಾತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಬಿಇಓ ತಿಳಿಸಿದರು.
ಇಂದು ಮೂರು ವಿಷಯಗಳ ಪರೀಕ್ಷೆ ನಡೆದಿದ್ದು, ಗಣಿತ ಪರೀಕ್ಷೆಗೆ ೨೭೨೩ ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಇದರಲ್ಲಿ ೨೭೧೦ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೩ ಮಂದಿ ಗೈರಾಗಿದ್ದರು. ವಿಜ್ಞಾನ ವಿಷಯದಲ್ಲಿ ೨೭೨೪ ವಿದ್ಯಾರ್ಥಿಗಳ ಪೈಕಿ ೨೭೧೧ ಮಂದಿ ಹಾಜರಾಗಿದ್ದರೆ ೧೩ ಮಂದಿ ಗೈರಾಗಿದ್ದರು. ಸಮಾಜ ವಿಷಯದ ಪರೀಕ್ಷೆಗೆ ೨೬೮೦ ಮಂದಿ ಹಾಜರಾಗಬೇಕಿದ್ದು, ಇದರಲ್ಲಿ ೨೬೬೮ ಮಂದಿ ಪರೀಕ್ಷೆ ಬರೆದರು. ೧೨ ವಿದ್ಯಾರ್ಥಿಗಳು ಗೈರಾಗಿದ್ದರು.
ತಾಲೂಕಿನಲ್ಲಿ ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶಾಸಕ ಅಪ್ಪಚ್ಚು ರಂಜನ್ ಅವರು ಬಿಸ್ಕೆಟ್‌ನ ವ್ಯವಸ್ಥೆ ಕಲ್ಪಿಸಿದ್ದರು.