ಮಡಿಕೇರಿ, ಜು. ೧೯ : ಮಾರ್ಚ್ ೨೦೨೧ ನೇ ತ್ರೈಮಾಸಿಕದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧ್ಯಕ್ಷತೆಯಲ್ಲಿ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ವಲಯದ ಉಪ ಕ್ಷೇತ್ರೀಯ ವ್ಯವಸ್ಥಾಪಕ ಸೆಲ್ವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಬ್ಯಾಂಕಿನ ಒಟ್ಟು ಆರ್ಥಿಕ ವಹಿವಾಟಿನ ಚಿತ್ರಣವನ್ನ ಸಭೆಗೆ ನೀಡಿದರು. ತದನಂತರ ಜಿಲ್ಲಾಧಿಕಾರಿ ಜಿಲ್ಲಾವಾರು ಬ್ಯಾಂಕುಗಳ ಪ್ರಗತಿ ಪರಿಶೀಲನೆ ನಡೆಸಿ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು.
ಜಿಲ್ಲಾ ಅಗ್ರಣೀ ಬ್ಯಾಂಕಿನ ಮುಖ್ಯಸ್ಥರಾದ ಆರ್.ಕೆ.ಬಾಲಚಂದ್ರ ಅವರು ೨೦೨೦-೨೧ ನೇ ಸಾಲಿನ ಜಿಲ್ಲಾ ಅಂಕಿ ಅಂಶಗಳ ಕುರಿತು ಮಾತನಾಡಿ ಮಾರ್ಚ್ ವರ್ಷಾಂತ್ಯಕ್ಕೆ ಜಿಲ್ಲೆಯಲ್ಲಿ ಶಾಖೆಗಳ ಒಟ್ಟು ಸಂಖ್ಯೆ ೧೭೬ ಆಗಿದ್ದು, ಒಟ್ಟು ಠೇವಣಿಗಳು ರೂ. ೭೧೯೮ ಕೋಟಿ, ಮುಂಗಡ ರೂ. ೫೩೨೧ ಕೋಟಿ, ಮುಂಗಡ ಹಾಗೂ ಠೇವಣಿಗಳ ಅನುಪಾತ ಪ್ರತಿಶತ ೭೪ ಆಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ವಯ ರೂ.೪೨೭೫ ಕೋಟಿ ಗುರಿ ನಿಗದಿಪಡಿಸಿದ್ದು, ಅದರಲ್ಲಿ ೮೫ ಪ್ರತಿಶತ (ರೂ. ೩೬೫೦ ಕೋಟಿ) ಆದ್ಯತಾ ವಲಯಕ್ಕೆ ಮೀಸಲಿಟ್ಟಿದ್ದು, ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.೨೫೬೫ ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.೮೦೯ ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ. ೨೭೬ ಕೋಟಿ ಗುರಿ ನಿಗದಿಪಡಿಸಿದ್ದು ಕ್ರಮವಾಗಿ ರೂ.೨೯೨೯ ಕೋಟಿ ಒಟ್ಟು ಸಾಲ ವಿತರಣೆ, ಅವುಗಳಲ್ಲಿ ಆದ್ಯತಾ ವಲಯಕ್ಕೆ ರೂ.೨೩೭೮ ಕೋಟಿ, ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ರೂ.೧೬೯೯ ಕೋಟಿ, ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಕ್ಕೆ ರೂ.೪೦೦ ಕೋಟಿ ಮತ್ತು ಇತರೆ ಆದ್ಯತಾ ವಲಯಕ್ಕೆ ರೂ. ೨೮೦ ಕೋಟಿ ಗುರಿ ಸಾಧಿಸಲಾಗಿದೆ.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಬ್ಯಾಂಕುಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಸಮನ್ವಯತೆಯನ್ನು ಸಾಧಿಸುವುದರ ಮೂಲಕ ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ರಾಮಚಂದ್ರ ನಾಯಕ್, ಜಿ.ಪಂ. ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ವಿವಿಧ ಬ್ಯಾಂಕುಗಳ ಕ್ಷೇತ್ರೀಯ ಕಾರ್ಯಾಲಯದ ಪ್ರತಿನಿಧಿಗಳು, ಬ್ಯಾಂಕುಗಳ ಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.