ಕಣಿವೆ, ಜು. ೧೬: ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶದಲ್ಲಿನ ಹವಾಗುಣ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾದ ಕಪ್ಪು ಭತ್ತ ಬೇಸಾಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದ ಕೃಷಿಕರು ಮುಂದಾಗಿದ್ದಾರೆ.

ಕೊಡಗು ಹಾಗೂ ಹಾಸನ ಸಾವಯವ ಕೃಷಿಕರ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಸಾದ್ ಅವರ ಆಸಕ್ತಿಯ ಫಲವಾಗಿ ಕೊಡಗಿನ ಹುಲುಸೆ ಗ್ರಾಮದಲ್ಲಿ ಆರಂಭಿಕವಾಗಿ ಹತ್ತು ಎಕರೆ ಭೂಮಿಯಲ್ಲಿ ಈ ಕಪ್ಪು ಭತ್ತ ಬೆಳೆಯಲು ಸಿದ್ಧತೆ ನಡೆಸಿದ್ದರೆ, ಹಾಸನ ಜಿಲ್ಲೆಯಲ್ಲಿ ೬೦ ಎಕರೆ ಭೂಮಿಯಲ್ಲಿ ಈ ಭತ್ತ ಬೆಳೆಯ ಲಾಗುತ್ತಿದೆ. ಸಾಂಪ್ರದಾಯಕವಾಗಿ ಬೆಳೆಯುವ ಭತ್ತದ ಫಸಲಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯೂ ಸಿಗಲ್ಲ. ಭತ್ತದ ಬೇಸಾಯಕ್ಕೆ ಕೂಲಿ ಕಾರ್ಮಿಕರ ಅಲಭ್ಯತೆ, ಆದಾಯಕ್ಕಿಂತ ಹೆಚ್ಚಿನ ವೆಚ್ಚ, ಬೆಳೆದ ಬೆಳೆ ಕಾಡಾನೆಗಳ ಪಾಲಾಗುತ್ತಿರುವುದು ಸೇರಿದಂತೆ ಮತ್ತಿತರ ಕಾರಣ ಗಳಿಂದಾಗಿ ಭತ್ತ ಬೆಳೆಯದೇ ಪಾಳು ಬಿಡುತ್ತಿದ್ದ ಕೃಷಿಕರಲ್ಲಿ ಈ ಕಪ್ಪು ಭತ್ತದ ಬೇಸಾಯ ನವೀನವಾದ ಆಶಾಭಾವನೆ ಮೂಡಿಸಿದೆ.

ಅಂದರೆ ಮಾಮೂಲಿ ಭತ್ತಕ್ಕಿಂತಲೂ ಮಾರುಕಟ್ಟೆಯಲ್ಲಿ ಈ ಕಪ್ಪು ಭತ್ತಕ್ಕೆ ಕ್ವಿಂಟಾಲ್ ಒಂದಕ್ಕೆ ೩,೫೦೦ ರೂಗಳಿಂದ ೪ ಸಾವಿರ ಗಳವರೆಗೂ ಹೆಚ್ಚು ಬೆಲೆ ಸಿಗಲಿದೆ. ಬಿತ್ತನೆಯಿಂದ ೧೫೦ ದಿನಗಳ ಒಳಗೆ ಕಟಾವಿಗೆ ಬರುವ ಈ ಕಪ್ಪು ಭತ್ತ ಎಕರೆಗೆ ೧೫ ರಿಂದ ೨೦ ಕ್ವಿಂಟಾಲ್ ಇಳುವರಿ ಬರುತ್ತದೆ ಎಂದು ಬೆಳೆ ಪ್ರಯೋಗ ನಡೆಸಿರುವ ಒಕ್ಕೂಟದ ಸಿಇಒ ಜಯಪ್ರಸಾದ್ ಹೇಳುತ್ತಾರೆ. ಈ ಭತ್ತವನ್ನು ಜೂನ್ ಅಥವಾ ಜುಲೈ ಎರಡನೇ ವಾರದೊಳಗೆ ಬಿತ್ತನೆ ಮಾಡಿದರೆ ಡಿಸೆಂಬರ್ ನಲ್ಲಿ ಕಟಾವಿಗೆ ಬರುತ್ತದೆ. ಭವಿಷ್ಯದಲ್ಲಿ ಈ ಭತ್ತಕ್ಕೆ ಹೆಚ್ಚು ಬೇಡಿಕೆ ಸಿಗಲಿದೆ. ಅತ್ಯಂತ ಹೆಚ್ಚು ಪೌಷ್ಟಿಕಾಂಶಗಳುಳ್ಳ ಈ ಭತ್ತ ಮಧುಮೇಹ ಸೇರಿದಂತೆ ವಿವಿಧ ರೋಗ ರುಜಿನಗಳ ಬಾಧಿತರಿಗೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ.

ಕೊಡಗು ಜಿಲ್ಲೆಯಲ್ಲಿ ೧೫೦೦ ನೊಂದಾಯಿತ ಸಾವಯವ ಕೃಷಿಕರಿದ್ದು ಹದಿನಾರು ಹೋಬಳಿ ಗಳಲ್ಲಿಯೂ ಕೊಡಗು ಹಾಸನ ಸಾವಯವ ಕೃಷಿಕರ ಒಕ್ಕೂಟದ ಘಟಕಗಳನ್ನು ರಚಿಸಲಾಗಿದೆ. ಆದರೆ ೧೬ ರ ಪೈಕಿ ೧೧ ಹೋಬಳಿಗಳ ಒಕ್ಕೂಟಗಳು ಸಕ್ರಿಯವಾಗಿವೆ. ಈ ಪೈಕಿ ಕುಶಾಲನಗರ ಸಮೀಪದ ಹುಲುಸೆ ಗ್ರಾಮದ ಸಾವಯವ ಒಕ್ಕೂಟದ ಅಧ್ಯಕ್ಷ ಹೇಮಂತ್, ಕೃಷಿಕರಾದ ಕಪನಪ್ಪ, ಹರೀಶ್, ಚಂದ್ರಪ್ಪ ಮತ್ತಿತರ ಕೃಷಿಕರು ಸೇರಿಕೊಂಡು ಆರಂಭಿಕವಾಗಿ ೧೦ ಎಕರೆ ಭೂಮಿಯಲ್ಲಿ ಈ ಕಪ್ಪು ಭತ್ತ ನಾಟಿ ಮಾಡುತ್ತಿದ್ದಾರೆ ಎಂದು ಜಯಪ್ರಸಾದ್ ತಿಳಿಸಿದ್ದಾರೆ.

ಹಾಸನ-ಕೊಡಗು ಸಾವಯವ ಕೃಷಿಕರ ಸಂಘದಿAದ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೃಷಿ ಅಧ್ಯಯನ ಪ್ರವಾಸ ನಡೆಸಿದಾಗ ಅಲ್ಲಿನ ರೈತರೊಬ್ಬರು ಬಳಸುತ್ತಿದ್ದ ಒಂದು ಹಿಡಿಯಷ್ಟು ಈ ಭತ್ತದ ಬೀಜವನ್ನು ತಂದು ಪ್ರಾಯೋಗಿಕವಾಗಿ ಬೆಳೆಯಲಾಯಿತು. ನಂತರ ಒಂದು ಎಕರೆಯಲ್ಲಿ ಬಿತ್ತನೆ ಮಾಡಿ ಬೆಳೆಯಲಾಯಿತು. ನಂತರ ಈ ಒಂದು ಎಕರೆ ಭೂಮಿಯಲ್ಲಿ ಬಂದ ಉತ್ಕೃಷ್ಟ ಪ್ರಮಾಣದ ಈ ಫಸಲಿನ ಬೀಜೋಪಚಾರ ನಡೆಸಿ ವಿವಿಧ ರೈತರಿಗೆ ಕೊಟ್ಟು ಬೆಳೆಸಲಾಗುತ್ತಿದೆ. ಹಾಸನದಲ್ಲಿ ೫೦ ಎಕರೆ ಹಾಗು ಕೊಡಗು ಜಿಲ್ಲೆಯಲ್ಲಿ ೧೦ ಎಕರೆ ಭೂಮಿಯಲ್ಲಿ ಈ ಬ್ಲಾಕ್ ರೈಸ್ ಭತ್ತ ಬೆಳೆಯಲಾಗುತ್ತಿದೆ. ಕಪ್ಪು ಭತ್ತದ ಬೇಸಾಯಕ್ಕೆ ಆಸಕ್ತಿ ಉಳ್ಳವರು ಮಾಹಿತಿಗೆ ಜಯಪ್ರಸಾದ್ ಅವರನ್ನು ಸಂಪರ್ಕಿಸಬಹುದು. ೭೦೨೨೨೯೯೭೦೦

- ಮೂರ್ತಿ