ಗುಡ್ಡೆಹೊಸೂರು, ಜು. ೧೬: ಇಲ್ಲಿನ ಸಿದ್ದಾಪುರ ರಸ್ತೆಯಲ್ಲಿ ಹೊಸದಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಆಮೆ ನಡುಗೆಯ ರೀತಿಯಲ್ಲಿ ನಡೆಯುತ್ತಿದೆ. ಗುಡ್ಡೆಹೊಸೂರಿನ ವೃತ್ತದ ಬಳಿ ಅಂಗಡಿಗಳು, ಹೊಟೇಲ್‌ಗಳು, ಅಲ್ಲಿನ ಸಹಕಾರ ಸಂಘದ ಮಳಿಗೆ, ಹಾಲು ಸಹಕಾರ ಸಂಘದ ಕಟ್ಟಡ, ದೂರವಾಣಿ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ ಹೀಗೆ ಅಲ್ಲಿಗೆ ತೆರಳುವ ಸ್ಥಳದಲ್ಲಿ ಚರಂಡಿ ನಿರ್ಮಾಣ ಮಾಡಲು ಯಂತ್ರದ ಮೂಲಕ ಚರಂಡಿ ತೆಗೆದು ಸುಮಾರು ಒಂದು ತಿಂಗಳಿನಿAದ ಹಾಗೆಯೇ ಬಿಡಲಾಗಿದೆ.

ರಸ್ತೆಯ ಒಂದು ಬದಿಯಲ್ಲಿ ಅಲ್ಪಸ್ವಲ್ಪ ಕಾಮಗಾರಿ ಮುಗಿಸಲಾಗಿದೆ, ಆದರೆ ಇನ್ನೊಂದು ಬದಿಯಲ್ಲಿ ಕೆಲಸ ಪೂರ್ಣಗೊಂಡಿಲ್ಲ. ಮಳೆಗಾಲ ಕಾರಣ ವಾಹನಗಳು ರಸ್ತೆಯ ಬದಿಗೆ ಬಂದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಅಲ್ಲದೆ ವಿದ್ಯುತ್ ಕಂಬಗಳ ನಡುವೆ ಚರಂಡಿ ನಿರ್ಮಿಸಿದ್ದು. ಸದ್ಯದಲ್ಲಿ ಹಲವು ಕರೆಂಟ್ ಕಂಬಗಳು ನೆಲಕ್ಕುರಳುವ ಸಾಧ್ಯತೆಗಳಿವೆ. ೬ ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಿದ್ದು, ಗುತ್ತಿಗೆದಾರರು ಯಾವ ಕೆಲಸವನ್ನೂ ಕೂಡ ಪೂರ್ಣ ಗೊಳಿಸಲಿಲ್ಲ. ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಈ ಭಾಗದ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗುಡ್ಡೆಹೊಸೂರಿನ ಮುಂದೆ ಸಿದ್ದಾಪುರ ಮಾರ್ಗದಲ್ಲಿ ಸುಮಾರು ೨ ಕಿ.ಮೀ ರಸ್ತೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸ ಬೇಕಾಗಿದೆ. ಆ ಕೆಲಸಕೂಡ ಅಪೂರ್ಣವಾಗಿದ್ದು ರಸ್ತೆಯ ಎಲ್ಲಾ ಭಾಗಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಾಗಿವೆ. ಈ ವಿಭಾಗದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿದ್ದು ರಸ್ತೆ ಯಾವುದು ಗುಂಡಿಯಾವುದು ಎಂಬುದು ವಾಹನ ಸವಾರರಿಗೆ ತಿಳಿಯುತ್ತಿಲ್ಲ.