ಸಿದ್ದಾಪುರ : ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುತ್ತದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆ ಪ್ರವಾಹ ಪೀಡಿತ ಸಿದ್ದಾಪುರದ ಕರಡಿಗೋಡು, ಗುಹ್ಯ ಗ್ರಾಮದ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಂದಾಯ ಇಲಾಖೆಯ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು-ಗುಹ್ಯ, ಕೊಂಡAಗೇರಿ ಗ್ರಾಮದ ನದಿ ತೀರದ ೨೦೦ಕ್ಕೂ ಅಧಿಕ ಕುಟುಂಬಗಳಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಾ. ಯೋಗಾನಂದ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಭಾನುಪ್ರಿಯ ಹಾಗೂ ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್ ಹಾಗೂ ಸಹಾಯಕ ಕೃಷ್ಣನ್ ಕುಟ್ಟಿರವರು ಮನೆ- ಮನೆಗಳಿಗೆ ತೆರಳಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟೀಸ್ ಜಾರಿ ಮಾಡಿದರು. ಈಗಾಗಲೇ ಮಳೆಗಾಲ ಆರಂಭವಾಗುವ ಮುಂಚಿತವೇ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟೀಸ್ ಜಾರಿಮಾಡಲಾಗಿತ್ತು. ಆದರೆ ಇದೀಗ ಅಂತಿಮವಾಗಿ ನೋಟೀಸ್ ಅನ್ನು ಕಂದಾಯ ಇಲಾಖಾಧಿಕಾರಿಗಳು ನೀಡಿದ್ದಾರೆ. ನದಿ ತೀರದ ನಿವಾಸಿಗಳನ್ನು ಸ್ಥಳಾಂತರ ಮಾಡುವ ಹಿನ್ನೆಲೆ ನದಿ ತೀರದ ಕುಟುಂಬಗಳ ಸದಸ್ಯರಿಗೆ ಲಸಿಕೆ ನೀಡಲಾಗಿದ್ದು, ಈ ಬಾರಿ ಕೊರೊನಾ ಸೋಂಕು ಇರುವ ಹಿನ್ನೆಲೆ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಡಾ. ಯೋಗಾನಂದ ‘ಶಕ್ತಿ’ಗೆ ತಿಳಿಸಿದರು. ಈಗಾಗಲೇ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲು ಎಲ್ಲಾ ರೀತಿಯ ಸಿದ್ಧತೆಯನ್ನು ಕಂದಾಯ ಇಲಾಖೆಯ ಮುಖಾಂತರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.