ಮಡಿಕೇರಿ ಜು.೧೪ : ಎಸ್‌ವೈಎಸ್ ಕೊಡಗು ಜಿಲ್ಲಾ ಸಮಿತಿಯು ಪ್ರಾಕೃತಿಕ ವಿಕೋಪದ ಸಂದರ್ಭ ತುರ್ತುಸೇವೆ ಯನ್ನು ಒದಗಿಸಲು ‘ಎಸ್‌ವೈಎಸ್ ಆಮಿಲ ಟಾಸ್ಕ್ ಫೋರ್ಸ್ ತಂಡ’ ವನ್ನು ರಚಿಸಿದೆ. ಈ ತಂಡದ ಸೇವೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಸ್‌ವೈಎಸ್ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

ಕಳೆದ ೩ ವರ್ಷಗಳಿಂದ ಜಿಲ್ಲೆಯಲ್ಲಿ ಮಹಾಮಳೆಯಿಂದಾಗಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿದ್ದು, ಇಂತಹ ಅಪಾಯದ ಸಂದರ್ಭ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಪ್ರತ್ಯೇಕ ತರಬೇತಿ ಪಡೆದ ೨೦೦ ಸದಸ್ಯರನ್ನು ಒಳಗೊಂಡ 'ಎಸ್‌ವೈಎಸ್ ಆಮಿಲ ಟಾಸ್ಕ್ ಫೋರ್ಸ್ ತಂಡ' ರಚನೆಗೊಂಡಿದೆ.

ಐದು ತಂಡಗಳಾಗಿ ವಿಂಗಡಿಸಿ ಪ್ರತಿ ತಂಡಕ್ಕೂ ಒಬ್ಬ ನಾಯಕನನ್ನು ಆಯ್ಕೆ ಮಾಡಿ ತುರ್ತು ಸೇವೆ ಸಲ್ಲಿಸಲು ಎಸ್‌ವೈಎಸ್ ನೇಮಕ ಮಾಡಿದೆ. ಜಿಲ್ಲೆಯಲ್ಲಿ ಗಾಳಿ, ಮಳೆ ಹೆಚ್ಚಾಗುತ್ತಿದ್ದು, ತಂಡ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಎಸ್‌ಪಿ ಕ್ಷಮಾಮಿಶ್ರ ಅವರಲ್ಲಿ ಎಸ್‌ವೈಎಸ್ ನಿಯೋಗ ಮನವಿ ಮಾಡಿಕೊಂಡಿತು.

ಎಸ್‌ವೈಎಸ್‌ನ ಜಿಲ್ಲಾಧ್ಯಕ್ಷ ಸಿಪಿಎಂ ಬಷೀರ್ ಹಾಜಿ, ತುರ್ತು ಸೇವಾ ತಂಡದ ಜಿಲ್ಲಾ ನಾಯಕ ಸಿ.ಎಂ. ಹಮೀದ್ ಮೌಲವಿ ಸುಂಟಿಕೊಪ್ಪ, ಕೆ.ಎ.ಯಾಕುಬ್ ಬಜೆಗುಂಡಿ, ವೈ.ಎಂ.ಉಮ್ಮರ್ ಫೈಝಿ ಸಿದ್ದಾಪುರ, ವಲಯ ತಂಡದ ನಾಯಕರಾದ ಮಾಹಿ ಹಾಜಿ ಎಮ್ಮೆಮಾಡು, ಅಬ್ದುಲ್ ಕರೀಂ ಸಿದ್ದಾಪುರ, ಮೊಹಮ್ಮದ್ ಆಲಿ ಗೋಣಿಕೊಪ್ಪ ಅವರುಗಳು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.