ಶ್ರೀಮಂಗಲ, ಜು. ೧೩: ದಕ್ಷಿಣ ಕೊಡಗಿನಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ ಮುಂದುವರೆದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕಳೆದ ೫ ದಿನಗಳಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಿದ್ದು, ದೂರವಾಣಿ ಸಂಪರ್ಕ, ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್, ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗೆ ತೊಂದರೆಯಾಗಿದೆ.

ಮಳೆಗಾಲ ಹಿನ್ನೆಲೆ ವಿದ್ಯುತ್ ಮಾರ್ಗದ ಬಗ್ಗೆ ಪೂರ್ವ ಸಿದ್ಧತೆ, ಮಾರ್ಗ ಅಡಚಣೆ ತೆರವು ಕಾರ್ಯ, ಅಗತ್ಯ ಸಾಮಗ್ರಿ, ಲೈನ್‌ಮೆನ್‌ಗಳ ನೇಮಕದಲ್ಲಿ ವಹಿಸಿದ ನಿರ್ಲಕ್ಷö್ಯದಿಂದ ವಿದ್ಯುತ್ ಕಡಿತ ಉಂಟಾಗಿದ್ದು, ತುರ್ತಾಗಿ ಸರಿಪಡಿಸುವ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಳೆ ಅಬ್ಬರ ಹಿನ್ನೆಲೆ ತೋಟಗಾರಿಕಾ ಬೆಳೆಗಳಿಗೆ ವ್ಯಾಪಕ ಹಾನಿ ಸಂಭವಿಸಿದ್ದು, ತೋಟದಲ್ಲಿ ಮರಗಳು, ಕಾಳುಮೆಣಸು ಆಶ್ರಯಿತ ಮರಗಳು, ಬಾಳೆ ಬೆಳೆಗೆ ನಷ್ಟ ಉಂಟಾಗಿದೆ.

ವಿದ್ಯುತ್ ದುರಸ್ತಿ ಕಾರ್ಯದಲ್ಲಿ ಸೆಸ್ಕ್ ಅಧಿಕಾರಿ, ಸಿಬ್ಬಂದಿಗಳು ನಿರತರಾಗಿದ್ದು, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ, ಕುಟ್ಟ, ಬಿ. ಶೆಟ್ಟಿಗೇರಿ, ಬಲ್ಯಮುಂಡೂರು, ಕಾನೂರು, ಬಾಳೆಲೆ, ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.