ಕುಶಾಲನಗರ, ಜು. ೧೩: ಕುಶಾಲನಗರದ ತಾವರೆಕೆರೆ ಪ್ರದೇಶದ ಸಮೀಕ್ಷಾ ವರದಿಯನ್ನು ತಕ್ಷಣ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕೆರೆ ಪ್ರದೇಶ ಒತ್ತುವರಿ ಮಾಡಲಾಗಿದೆ ಎಂದು ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇರೆಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆ ನಡೆಯಿತು. ಜುಲೈ ೯ ರಂದು ಕೆರೆ ಪ್ರದೇಶದ ಸರ್ವೆ ನಡೆಸಲಾಗಿದೆ. ಕೆರೆ ಜಾಗವನ್ನು ಒತ್ತುವರಿ ಮಾಡಿ ಕೆಲವರು ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದಾಗಿ ವಕೀಲ ಎನ್ ಪಿ ಅಮೃತೇಶ್ ನ್ಯಾಯಪೀಠದ ಗಮನಕ್ಕೆ ತಂದರು. ಸರ್ವೆ ವರದಿಯನ್ನು ತಕ್ಷಣ ಹೈಕೋರ್ಟ್ ಗೆ ಸಲ್ಲಿಸುವಂತೆ ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ವರದಿ ಲಭ್ಯವಾದ ನಂತರ ಒತ್ತುವರಿ ತೆರವು ಕುರಿತು ನ್ಯಾಯಾಲಯ ಆದೇಶ ನೀಡಲಿದೆ ಎಂದು ತಿಳಿಸಿ ವಿಚಾರಣೆಯನ್ನು ಜುಲೈ ೨೦ಕ್ಕೆ ಮುಂದೂಡಿದೆ.