ಮಡಿಕೇರಿ, ಜು. ೧೩: ಚೆಕ್‌ಬೌನ್ಸ್ ಪ್ರಕರಣ ಸಾಬೀತಾದ ಹಿನ್ನೆಲೆ ಆರೋಪಿಗೆ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯ ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವೀರಾಜಪೇಟೆ ತಾಲೂಕಿನ ನಲ್ಲೂರು ಗ್ರಾಮದ ನಿವಾಸಿ ಸೋಮಯ್ಯ (ಜಗದೀಶ್) ಅವರು ೨೦೧೧ರಲ್ಲಿ ರೂ. ೨೩ ಲಕ್ಷ ಹಣವನ್ನು ಕೈ ಸಾಲವಾಗಿ ಪುಚ್ಚಿಮಾಡ ಬಿದ್ದಪ್ಪ ಎಂಬವರಿAದ ಪಡೆದುಕೊಂಡಿದ್ದರು. ಸೋಮಯ್ಯ ಕೆನರಾ ಬ್ಯಾಂಕಿನ ಚೆಕ್ಕನ್ನು ೨೦೧೧ರಲ್ಲಿ ನಗದೀಕರಣಕ್ಕೆಂದು ನೀಡಿದ್ದರು.

ಆರೋಪಿಯ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲವೆಂದು ಆ ಚೆಕ್ಕು ಅಮಾನ್ಯಗೊಂಡಿರುತ್ತದೆ. ಈ ಬಗ್ಗೆ ಪುಚ್ಚಿಮಾಡ ಬಿದ್ದಪ್ಪ ಆರೋಪಿಯ ವಿರುದ್ಧ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ಪೊನ್ನಂಪೇಟೆ ಸಿವಿಲ್ ನ್ಯಾಯಾಧೀಶರಾದ ಗಿರಿಗೌಡ ಅವರು ಆರೋಪಿಯು ರೂ. ೨೩ ಲಕ್ಷ ಹಣವನ್ನು ಪುಚ್ಚಿಮಾಡ ಬಿದ್ದಪ್ಪ ಅವರಿಗೆ ನೀಡುವಂತೆ ತಪ್ಪಿದ್ದಲ್ಲಿ ೧ ವರ್ಷದ ಕಾರಾಗೃಹ ಶಿಕ್ಷೆ ಹಾಗೂ ರೂ. ೧೦ ಸಾವಿರ ದಂಡ ಪಾವತಿಸುವಂತೆ ತಪ್ಪಿದ್ದಲ್ಲಿ ೩ ತಿಂಗಳ ಕಾರಗೃಹ ಶಿಕ್ಷೆ ವಿಧಿಸಿ ಜೂನ್ ೩೦ ರಂದು ತೀರ್ಪು ನೀಡಿದ್ದಾರೆ. ಅರ್ಜಿದಾರ ಪುಚ್ಚಿಮಾಡ ಬಿದ್ದಪ್ಪನವರ ಪರ ವೀರಾಜಪೇಟೆ ವಕೀಲ ಚಿಮ್ಮಂಗಡ ಕೆ. ಪೂವಣ್ಣನವರು ವಕಾಲತ್ತು ವಹಿಸಿದ್ದರು.