ಕೂಡಿಗೆ, ಜು. ೧೨: ಕುಶಾಲನಗರ ತಾಲೂಕು ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಕೂಡಿಗೆ, ಸಿದ್ದಲಿಂಗಪುರ, ಅಳುವಾರ ಗ್ರಾಮಗಳಲ್ಲಿ ಈ ಬಾರಿ ಹೆಚ್ಚಾಗಿ ಸಿಹಿಗೆಣಸು ಬೆಳೆಯನ್ನು ಬೆಳೆಯಲಾಗಿದೆ. ಆದರೆ ಕಳೆದ ಮೂರು ತಿಂಗಳಲ್ಲಿ ಬೆಲೆ ತೀರಾ ಕಡಿಮೆಯಾಗಿತ್ತು. ಇದೀಗ ಗೆಣಸು ಖರೀದಿ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಏರಿಕೆಯಾದ ಹಿನ್ನೆಲೆ ರೈತರಿಗೆ ಆಶಾಭಾವನೆಯಾಗಿದೆ.
ಸಿಹಿಗೆಣಸು ರೈತರ ವಾಣಿಜ್ಯ ಬೆಳೆಯ ಜೊತೆಗೆ ಉಪ ಬೆಳೆಯಾಗಿರುತ್ತದೆ. ಈ ಭಾಗದ ನೂರಾರು ರೈತರು ತಮ್ಮ ಜಮೀನಿನಲ್ಲಿ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಿಕೊಂಡಿದ್ದಾರೆ. ಅದರ ಮೂಲಕ ನೀರಿನ ಸೌಲಭ್ಯವನ್ನು ಬಳಕೆ ಮಾಡಿ ಸಿಹಿ ಗೆಣಸನ್ನು ಬೆಳೆಯಲಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಸಿಹಿಗೆಣಸು ಸಾಗಾಣಿಕೆಯಾಗದ ಪರಿಣಾಮವಾಗಿ ಬೆಲೆ ಕಡಿಮೆ ಯಾಗಿತ್ತು. ಕಳೆದ ತಿಂಗಳಲ್ಲಿ ರೈತರಿಂದ ಖರೀದಿಸುವವರು ಕೇವಲ ೨ ರೂ.ಗೆ ಒಂದು ಕೆ.ಜಿ. ಸಿಹಿಗೆಣಸನ್ನು ಪಡೆಯಲು ಬರುತ್ತಿದ್ದರು. ಇದೀಗ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಆಗಿ ಒಂದು ಕೆ.ಜಿ. ಸಿಹಿಗೆಣಸಿಗೆ ೭ ರೂ.ನಂತೆ ಖರೀದಿಸುತ್ತಿದ್ದಾರೆ.
ಕಳೆದ ಒಂದು ತಿಂಗಳಿAದ ಸಿಹಿಗೆಣಸು ಕೇರಳ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೆ ಸಾಗಾಣಿಕೆ ಆಗುತ್ತಿರುವುದರಿಂದ ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಕೆ ಆಗಿರುವುದರಿಂದ ಖರ್ಚು ಮಾಡಿದ ಹಣವಾದರೂ ಸಿಗುತ್ತಿದೆ ಎನ್ನುತ್ತಾರೆ ಈ ಭಾಗದ ಅನೇಕ ರೈತರು.
ಉಪಬೆಳೆಯಾದರೂ ಹಸುಗಳಿಗೆ ಬಹಳ ಉಪಯುಕ್ತ. ಈ ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಸಿಹಿಗೆಣಸು ಬೆಳೆ ಉತ್ತಮವಾಗಿ ಬರುವುದರಿಂದ, ಈ ಭಾಗದಲ್ಲಿ ಅನೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸಿಹಿಗೆಣಸು ಬಳ್ಳಿಯನ್ನು ಕೊಯ್ದು ಹಸುಗಳಿಗೆ ಹಾಕುತ್ತಾರೆ. ಹಸುಗಳು ಹುಲ್ಲಿನ ಜೊತೆಯಲ್ಲಿ ಗೆಣಸನ್ನೂ ತಿನ್ನುವುದರಿಂದ ಹೆಚ್ಚು ಇಳುವರಿಯಾಗಿ ಹಾಲನ್ನು ನೀಡುತ್ತಿವೆ. ಬೇಸಿಗೆ ಸಂದರ್ಭ ಹುಲ್ಲಿನ ಕೊರತೆಯನ್ನು ಸಿಹಿಗೆಣಸು ಬಳ್ಳಿ ನೀಗಿಸುತ್ತದೆ. ಇದರಿಂದಾಗಿ ಈ ವ್ಯಾಪ್ತಿಯ ನೂರಾರು ರೈತರು ಸಿಹಿಗೆಣಸು ಬೆಳೆಯನ್ನು ಬೆಳೆದಿದ್ದಾರೆ.
ಈ ಭಾಗಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚು ಇರುವುದರಿಂದ ಹೈನುಗಾರಿಕೆ ಪೂರಕವಾಗುವಂತೆ ಸಿಹಿಗೆಣಸು ಬೆಳೆಯನ್ನು ಬೆಳೆಯುತ್ತಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ