*ಗೋಣಿಕೊಪ್ಪ, ಜು. ೧೨: ಯುವ ಸಮುದಾಯ ಕೃಷಿ ಚಟುವಟಿಕೆಯತ್ತ ಒಲವು ಹೊಂದಿ ಉತ್ತಮ ಕೃಷಿ ಉತ್ಪಾದನೆಯನ್ನು ಗಳಿಸಿ ಜಿಲ್ಲೆಯಲ್ಲಿ ಕೃಷಿ ಪ್ರಾಧಾನ್ಯತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಸಲಹೆ ನೀಡಿದರು.

ಅಮ್ಮತ್ತಿ, ಕಾರ್ಮಾಡು ಸಂಜೀವಿನಿ ಒಕ್ಕೂಟಕ್ಕೆ ರೂ. ೧೦ ಲಕ್ಷ ಅನುದಾನದಲ್ಲಿ ಕೃಷಿ ಚಟುವಟಿಕೆಗೆ ಕೃಷಿ ಇಲಾಖೆಯ ವತಿಯಿಂದ ನೀಡಿದ ಟ್ರಾ÷್ಯಕ್ಟರಿಗೆ ಪೂಜೆ ಸಲ್ಲಿಸಿ ಸಂಜೀವಿನ ಒಕ್ಕೂಟದ ಪದಾಧಿಕಾರಿಗಳ ಸುಪರ್ಧಿಗೆ ವಹಿಸಿ ಮಾತನಾಡಿದರು.

ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಹೆಚ್ಚಿನ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪಾಳುಬಿದ್ದ ಗದ್ದೆಗಳನ್ನು ಹಸಿರೀಕರಣ ಮಾಡುವ ಪೂರಕ ವಾತಾವರಣ ನಿರ್ಮಾಣವಾಗ ಬೇಕು. ಇದಕ್ಕೆ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಶಾಶ್ವತ ಪರಿಹಾರ ವನ್ನು ಒದಗಿಸಿಕೊಡಬೇಕೆಂದು ತಿಳಿಸಿದರು.

ಭತ್ತದ ಬೆಳೆಗೆ ಪೂರಕವಾದ ವಾತಾವರಣವನ್ನು ಹೆಚ್ಚಿಸಿ ಅಧಿಕ ಉತ್ಪಾದನೆ ಹೊಂದಲು ಇಲಾಖೆಯ ಸಹಕಾರವನ್ನು ರೈತರು ಪಡೆದುಕೊಳ್ಳ ಬೇಕು. ಸಂಜೀವಿನಿ ಒಕ್ಕೂಟ ಇಲಾಖೆಯ ಸಬ್ಸಿಡಿ ಅನುದಾನದಿಂದ ಪಡೆದ ಟ್ರಾ÷್ಯಕ್ಟರ್ ಬಳಕೆಯನ್ನು ಕೃಷಿ ಕಾರ್ಯಗಳಲ್ಲಿ ತೊಡಗಿಸಲು ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಈ ವ್ಯಾಪ್ತಿಯಲ್ಲಿ ಭತ್ತ ಬೆಳೆಯದೇ ಇರುವ ಗದ್ದೆಗಳಲ್ಲಿ ಹಸಿರು ನಳನಳಿಸುವಂತೆ ಮಾಡುವ ಪ್ರಯತ್ನಕ್ಕೆ ಒಕ್ಕೂಟದ ಶ್ರಮ ವ್ಯಯಿಸಬೇಕು ಎಂದು ಸಲಹೆ ನೀಡಿದರು.

೨೦೨೪ರ ಒಳಗೆ ರೈತರ ಉತ್ಪಾದನೆಯಲ್ಲಿ ದುಪ್ಪಟ್ಟು ಆದಾಯ ಬರುವಂತೆ ವ್ಯವಸ್ಥಿತ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸಿಕೊಂಡು ರೈತರ ಏಳಿಗೆಗಾಗಿ ವಿಶೇಷ ಆಸಕ್ತಿಯನ್ನು ಹೊಂದಿದೆ. ಈ ಮೂಲಕ ಕೃಷಿ ಇಲಾಖೆಯಿಂದ ಸುಲಭ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗ್ರಾ.ಪಂ. ಅಧ್ಯಕ್ಷ ಕುಂಞAಡ ನಿರನ್‌ನಾಣಯ್ಯ, ಉಪಾಧ್ಯಕ್ಷ ಮುಕ್ಕಾಟಿರ ಎ. ಸಂತೋಷ್, ಜಿಲ್ಲಾ ಕೃಷಿ ಯೋಜನಾ ನಿರ್ದೇಶಕ ಶ್ರೀಕಂಠಯ್ಯ, ತಾಲೂಕು ಕೃಷಿ ಅಧಿಕಾರಿ ಶಿವಮೂರ್ತಿ, ಜಿಲ್ಲಾ ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕ ಕುಮಾರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವನಜಾಕ್ಷಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಿತಿನ್ ಉಪಸ್ಥಿತರಿದ್ದರು.

-ಎನ್.ಎನ್. ದಿನೇಶ್