*ವೀರಾಜಪೇಟೆ, ಜು. ೧೨: ಕಳ್ಳತನಕ್ಕೆಂದು ಬಂದ ಕಳ್ಳನನ್ನು ಮನೆಯವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಡಂಗ-ಮರೂರಿನಲ್ಲಿ ನಡೆದಿದೆ.
ಕಳ್ಳತನಕ್ಕೆ ಯತ್ನಿಸಿದ ಆರೋಪಿ ಬೆೆÃತ್ರಿ ಗ್ರಾಮದ ಗಿರೀಶ್ ಇದೀಗ ಪೊಲೀಸರ ವಶದಲ್ಲಿದ್ದು, ತಲೆಮರೆಸಿಕೊಂಡಿದ್ದ ಐಕೊಳ ಗ್ರಾಮದ ಮತ್ತೋರ್ವ ಆರೋಪಿ ವಿಠಲ ಕೂಡ ಕೆಲ ಸಮಯದಲ್ಲಿಯೇ ಮೂರ್ನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ
ತಾ. ೧೧ ರ ಮಧ್ಯರಾತ್ರಿ ೨ ಗಂಟೆ ಹೊತ್ತಿಗೆ ಕಡಂಗ-ಮರೂರಿನ ಬಲ್ಯಚಂಡ ಸುಗುಣ ಸುಬ್ಬಯ್ಯ ಎಂಬವರ ಮನೆಗೆ ಇಬ್ಬರು ಕಳ್ಳರು ಕಳ್ಳತನಕ್ಕೆಂದು ಕೈಯಲ್ಲಿ ಆಯುಧ ಹಿಡಿದು ಹೊಂಚು ಹಾಕಿ ನಿಂತಿದ್ದಾರೆ. ಈ ಸಮಯದಲ್ಲಿ ಸಾಕು ನಾಯಿ ಬೊಗಳಲಾರಂಭಿಸಿದೆ. ನಂತರ ಎಚ್ಚರಗೊಂಡ ಸುಗುಣ ಅವರ ಪತ್ನಿ ಪುಷ್ಪ ಮನೆಯ ಹೊರಭಾಗವನ್ನು ಗಮನಿಸಿದ್ದಾರೆ. ವಿದ್ಯುತ್ ಸ್ವಿಚ್ ಆನ್ ಮಾಡಲು ಹೋದಾಗ ವಿದ್ಯುತ್ ವ್ಯತ್ಯಯವಾಗಿದೆ. ನಂತರ ಇನ್ವರ್ಟರ್ ಆನ್ ಮಾಡಿದ್ದಾರೆ. ನಂತರ ಮನೆಯ ಹಾಲ್‌ನ ಕಿಟಕಿಯಿಂದ ನೋಡಿದಾಗ ಯಾರೋ ಇಬ್ಬರು ವ್ಯಕ್ತಿಗಳು ಕಪ್ಪು ಬಟ್ಟೆ ಧರಿಸಿ ನಿಂತಿರುವುದು ಗೋಚರಿಸಿದೆ.
ಒಬ್ಬನ ಕೈಯ್ಯಲ್ಲಿ ರಾಡ್, ಮತ್ತೊರ್ವನ ಕೈಯ್ಯಲ್ಲಿ ಚಾಕು ಇರುವುದನ್ನು ಕಂಡು ಭಯಬೀತರಾಗಿ ಬಂದು ಪತಿಗೆ ವಿಷಯ ತಿಳಿಸಿದ್ದಾರೆ. ಸುಗುಣ ಅವರ ಮಗ ಹಾಗೂ ಪತ್ನಿ ಬಂದು ನೋಡುವಷ್ಟರಲ್ಲಿ ಒಬ್ಬ ಕಳ್ಳ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮತ್ತೊಬ್ಬ ಕಳ್ಳ ಮನೆಯ ಹಿಂಬದಿಗೆ ಓಡಿ ಹೋಗಿದ್ದಾನೆ. ಇದನ್ನು ನೋಡಿದ ಸುಗುಣ ಅವರು ಮನೆಯಲ್ಲಿದ್ದ ಕೋವಿಯಿಂದ
(ಮೊದಲ ಪುಟದಿಂದ) ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮನೆಯ ಹಿಂಬದಿಯಲ್ಲಿದ್ದ ಕಳ್ಳ ಹೆದರಿ ಹೂಗಿಡದ ಹಿಂಬದಿಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ನಂತರ ಮನೆ ಪಕ್ಕದವರೊಬ್ಬರಿಗೆ ಸುಬ್ಬಯ್ಯ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಮನೆ ಪಕ್ಕದವರು, ಸುಗುಣರ ಮಗ ಸೇರಿ ಕಳ್ಳನನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿ ಬಳಿಕ ವೀರಾಜಪೇಟೆಯ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳ್ಳರನ್ನು ಹಿಡಿಯಲು ಹೋದಾಗ ತನ್ನ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಮನೆಯ ಹೊರಗಿನ ಮೈನ್ಸ್ ಆಫ್ ಮಾಡಿ, ಕಿಟಿಕಿ ಮುರಿದು ಕಳ್ಳತನ ಮಾಡಲು ಬಂದಿದ್ದಾರೆ. ಅಷ್ಟರಲ್ಲಿ ನಮಗೆ ಎಚ್ಚರವಾಗಿ ಸಿಕ್ಕಿಬಿದ್ದರು ಎಂದು ನಡೆದ ಘಟನೆಯನ್ನು ಮನೆಯ ಮಾಲೀಕ ಸುಗುಣ ಸುಬ್ಬಯ್ಯ ವಿವರಿಸಿದ್ದಾರೆ.
ಈ ಕುರಿತು ವೀರಾಜಪೇಟೆ ಗ್ರಾಮಾಂತರ ಠಾಣೆಗೆ ಸುಗುಣ ಸುಬ್ಬಯ್ಯನವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಾಗಿದೆ.
- ಉಷಾ ಪ್ರೀತಂ, ಕಿಶೋರ್ ಶೆಟ್ಟಿ