ಪೊನ್ನಂಪೇಟೆ. ಜು. ೧೨: ದಕ್ಷಿಣ ಕೊಡಗಿನಲ್ಲಿ ಮುಂಗಾರು ಮಳೆ ಕ್ಷೀಣಿಸಿದ್ದು ಭತ್ತದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಜೂನ್ ತಿಂಗಳಿನಲ್ಲಿ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹರ್ಷ ಗೊಂಡಿದ್ದ ಕೃಷಿಕರು ಮಳೆ ಕ್ಷೀಣಿಸಿರುವುದರಿಂದ ಗದ್ದೆ ಉಳುಮೆ ಮಾಡಲು ಸಾಧ್ಯವಾಗದೆ, ಕಳೆದ ಕೆಲವು ದಿನಗಳಿಂದ ಮೋಡ ಕಟ್ಟಿರುವ ಆಕಾಶವನ್ನು ನೋಡುತ್ತಾ ಮಳೆಯ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ. ಕಳೆದೆರಡು ದಿನದಿಂದ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ. ಇದರಿಂದ ಮಳೆ ಇಲ್ಲದೆ ಒಣಗುತ್ತಿದ್ದ ಭತ್ತದ ಸಸಿ ಮಡಿಗಳು ಜೀವ ಕಳೆ ಪಡೆದುಕೊಂಡಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿರುವ ಕಾರಣ ಗದ್ದೆಗಳಿಗೆ ನೀರು ಆಗಿಲ್ಲ. ಆದ್ದರಿಂದ ಬಹುತೇಕ ಕಡೆ ಇನ್ನೂ ಉಳುಮೆ ಕಾರ್ಯ ಪ್ರಾರಂಭಗೊAಡಿಲ್ಲ. ನೀರಿನ ಅಭಾವದಿಂದ ಕೆಲವು ಕಡೆಗಳಲ್ಲಿ ರೈತರು ಇನ್ನೂ ಭತ್ತ ಬಿತ್ತನೆಯನ್ನೇ ಮಾಡಿಲ್ಲ.
ಸ್ವಲ್ಪ ಪ್ರಮಾಣದಲ್ಲಿ ನೀರು ಆಗಿರುವ ಗದ್ದೆಗಳಲ್ಲಿ ಕೃಷಿಕರು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿಸುತ್ತಿದ್ದಾರೆ. ಗದ್ದೆಯನ್ನು ಹಸನು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಸಿ ಮಡಿಗಳು ಇನ್ನು ಒಂದು ವಾರದಲ್ಲಿ ನಾಟಿಗೆ ಸಿದ್ದಗೊಳ್ಳಲಿದ್ದು, ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಈ ವರ್ಷ ಮಳೆ ಕಡಿಮೆ ಇರುವ ಕಾರಣ ಗದ್ದೆ ಉಳುಮೆ ಕೆಲಸ ಬಹಳ ಕಡಿಮೆ ಆಗಿದೆ ಎಂದು ಟ್ರಾಕ್ಟರ್ ಮಾಲೀಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಮಳೆ ಸರಿಯಾಗಿ ಆಗಿದ್ದರೆ ಈ ಸಮಯಕ್ಕೆ ಗದ್ದೆ ಉಳುಮೆ ಕೆಲಸವನ್ನು ಮುಗಿಸಬೇಕಿತ್ತು. ಕೆಲವು ಕಡೆಗಳಲ್ಲಿ ಸಸಿ ಮಡಿಗಳು ನಾಟಿ ಮಾಡಲು ಇನ್ನು ಕೆಲವೇ ದಿನಗಳಲ್ಲಿ ಸಿದ್ಧವಾಗುತ್ತವೆ. ಆದರೆ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಇನ್ನೂ ಗದ್ದೆ ಉಳುಮೆ ಕೆಲಸಕ್ಕೆ ಕೈ ಹಾಕಿಲ್ಲ. ಕೊಲ್ಲಿ ಬದಿಯ ಗದ್ದೆಗಳಲ್ಲಿ ಮಾತ್ರ ನೀರಿದೆ. ಕೆÀರೆ ಗದ್ದೆಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಮಳೆ ಬರದೇ ಇದೇ ಪರಿಸ್ಥಿತಿ ಮುಂದುವರೆದರೆ ಭತ್ತದ ಕೃಷಿಗೆ ಹಿನ್ನಡೆಯಾಗಲಿದೆ ಎಂದು ಮುಗುಟಗೇರಿಯ ಕೃಷಿಕ ಚೀರಂಡ ಕಂದ ಸುಬ್ಬಯ್ಯ ಶಕ್ತಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊAಡಿದ್ದಾರೆ. ಪೊನ್ನಂಪೇಟೆ ಸಮೀಪದ ಬೇಗೂರು ಗ್ರಾಮದಲ್ಲಿ ವಿಸ್ತಾರವಾದ ಗದ್ದೆ ಬಯಲು ಇದ್ದು, ಪ್ರತಿ ವರ್ಷ ನೀರಿನಿಂದ ಗದ್ದೆಗಳೆಲ್ಲ ತುಂಬಿ ತುಳುಕುತಿದ್ದವು. ಆದರೆ ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಬಹುತೇಕ ಗದ್ದೆಗಳಲ್ಲಿ ಇನ್ನೂ ಉಳುಮೆ ಕಾರ್ಯವನ್ನೇ ಪ್ರಾರಂಭಿಸಿಲ್ಲ.
ಕೊಡಗಿನಲ್ಲಿ ಭತ್ತದ ಕೃಷಿಗೆ ಮಳೆ ಹೆಚ್ಚಾದರೂ ತೊಂದರೆ, ಕಡಿಮೆ ಯಾದರು ತೊಂದರೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಪ್ರದಾಯಿಕ ವಾಗಿ ಭತ್ತದ ಕೃಷಿಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊAಡಿ ರುವ ಬಹುತೇಕ ಕೊಡಗಿನ ಕೃಷಿಕರು ಗದ್ದೆಯ ಮೇಲಿನ ಪ್ರೀತಿಯಿಂದ ಲಾಭವೋ ನಷ್ಟವೋ ಗದ್ದೆಯನ್ನು ಪಾಳು ಬಿಡದೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊಡಗಿನ ಗದ್ದೆ ಕೃಷಿ ಮಾತ್ರ ಮಳೆಯೊಡನೆ ಆಡುವ ಜೂಜಾಟವೇ ಆಗಿದೆ. -ಚನ್ನನಾಯಕ