ಮಡಿಕೇರಿ, ಜು. ೧೧: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ, ಪ್ರಕೃತಿಯ ತವರು ಎಂದೆಲ್ಲ ಕರೆಸಿಕೊಳ್ಳುವ ಮಡಿಕೇರಿಯ ಮುಕುಟಮಣಿ ರಾಜಾಸೀಟ್ ವ್ಯಾಪ್ತಿ ಇದೀಗ ವಿಸ್ತಾರಗೊಂಡಿದೆ. ಪ್ರವಾಸಿಗರಲ್ಲದೆ ಸ್ಥಳೀಯರನ್ನು ಕೂಡ ಈ ಪ್ರದೇಶ ಆಕರ್ಷಿಸುತ್ತಿದೆ. ರಾಜಾಸೀಟ್ ಸುತ್ತಮುತ್ತ ತೆರೆದುಕೊಂಡಿರುವ ತಾಣಗಳು ಮನಸಿಗೆ ಮುದ ನೀಡುತ್ತಿವೆ.ರಾಜಾಸೀಟ್ ಕೊಡಗಿಗೆ ಯಾರೇ ಬಂದರು ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು. ಸೂರ್ಯಾಸ್ತಮದ ಸುಂದರ ದೃಶ್ಯ ಇಲ್ಲಿನ ಆಕರ್ಷಣೆಯಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ರಾಜಾಸೀಟ್ ವ್ಯಾಪ್ತಿ ವಿಶಾಲವಾಗಿ ಬೆಳೆಯುತ್ತಿದೆ. ನೆಹರು ಮಂಟಪ, ಕೂರ್ಗ್ ವಿಲೇಜ್ ರಾಜಾಸೀಟ್ ಸಮೀಪದಲ್ಲಿ ತಲೆ ಎತ್ತಿದ್ದು ಇದರೊಂದಿಗೆ ರಾಜಾಸೀಟ್‌ನೊಳಗೆ ಸುಂದರ ‘ವ್ಯೂ ಪಾಯಿಂಟ್’ ಕಾಮಗಾರಿ ಪ್ರಗತಿಯಲ್ಲಿದೆ. ಇವುಗಳು ಪ್ರವಾಸಿಗರು ಹಾಗೂ ಸ್ಥಳೀಯರ ಆಕರ್ಷಣಿಯ ಕೇಂದ್ರಬಿAದುವಾಗಿವೆ. ಮೊದಲು ರಾಜಾಸೀಟ್ ಮಾತ್ರ ಪ್ರವಾಸಿ ಕೇಂದ್ರವಾಗಿತ್ತು. ಇದೀಗ ಸುತ್ತಲ್ಲೂ ಇರುವ ಹೊಸ ತಾಣಗಳು ಮತ್ತಷ್ಟು ಹಿತ ಅನುಭವ ನೀಡುತಿದ್ದು, ಪ್ರವಾಸಿಗರನ್ನು ತನ್ನತ್ತ ಸೊಜಿಗಲ್ಲಿನಂತೆ ಸೆಳೆಯುತ್ತಿವೆ.ನೆಹರು ಮಂಟಪ ರಾಜಾಸೀಟ್‌ನಿಂದ ಅನತಿ ದೂರದಲ್ಲಿರುವ ಎಲ್ಲಾ ವ್ಯವಸ್ಥೆಗಳಿರುವ ನೆಹರು ಮಂಟಪ ಪ್ರವಾಸಿಗರನ್ನು ಹಾಗೂ ಸ್ಥಳೀಯರನ್ನು ಕೈಬೀಸಿ ಕರೆಯುತ್ತಿದೆ. ಸುಂದರ ವ್ಯೂ ಪಾಯಿಂಟ್ ಆಗಿರುವ ಈ ತಾಣಕ್ಕೆ ೧೯೫೭ರಲ್ಲಿ ಮಾಜಿ ಪ್ರಧಾನಿ ಜವಹಾರ್‌ಲಾಲ್‌ನೆಹರು ಅವರು ಭೇಟಿ ನೀಡಿ ಸೊಬಗನ್ನು ಆಸ್ವಾದಿಸಿದ್ದರು. ಅವರ ಭೇಟಿಯ ನೆನಪಿಗೆ ಈ ತಾಣಕ್ಕೆ ನೆಹರು ಮಂಟಪ ಎಂದು ನಾಮಕರಣ ಮಾಡಲಾಯಿತು.

ರಾಜಾಸೀಟ್‌ನಿಂದ ಆಕಾಶವಾಣಿ ಕೇಂದ್ರದ ಪಕ್ಕದಲ್ಲಿರುವ ಈ ಎತ್ತರದ ಪ್ರವಾಸಿ ತಾಣದಿಂದ ನಗರದ ವಿಹಂಗಮ ನೋಟ ಕಣ್ಮನ ಸೆಳೆಯುತ್ತದೆ. ಗಾಜಿನ ಮಂಟಪದೊಳಗೆ ಕೂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕಲ್ಲಿನ ಕುರ್ಚಿಯಲ್ಲಿ ಕೂತು ಪ್ರಕೃತಿಯ ದೃಶ್ಯ ಕಣ್ತುಂಬಿಕೊಳ್ಳಬಹುದು.

ಕೂರ್ಗ್ ವಿಲೇಜ್

ರೂ ೯೦ ಲಕ್ಷ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣಗೊಂಡಿರುವ ಕೂರ್ಗ್ ವಿಲೇಜ್ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಈ ಪ್ರದೇಶ ಜಂಜಾಟವನ್ನು ಮರೆಸಿ ಮನಸನ್ನು ಪ್ರಪುಲ್ಲಗೊಳಿಸುತ್ತದೆ.

ಕುಂದುರುಮೊಟ್ಟೆ ಚೌಡೇಶ್ವರಿ ದೇವಾಲಯದ ಎದುರು ಇರುವ ಈ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗೊಳಿಸಿದೆ. ತೋಟಗಾರಿಕೆ ಇಲಾಖೆ ಸೇರಿದ ಜಾಗ ಇದಾಗಿದ್ದು, ಇತ್ತೀಚಿಗಷ್ಟೆ ಇದನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಉದ್ಘಾಟನೆಗೊಳಿಸಿದ್ದರು.

ಸ್ವಚ್ಛಂದ ಪರಿಸರದಲ್ಲಿರುವ ಈ ಪ್ರವಾಸಿ ತಾಣದಲ್ಲಿ ಆಸನ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ಮಳಿಗೆಗಳನ್ನು ನಿರ್ಮಿಸಿದ್ದು, ಇಲ್ಲಿ ಕೊಡಗಿನ ಉತ್ಪನ್ನಗಳು ಲಭ್ಯವಾಗಲಿದೆ.

ಪ್ರವಾಸಿ ತಾಣದಲ್ಲಿ ಕೆರೆಯೊಂದಿದ್ದು, ಅಲ್ಲಿ ಮೀನುಗಳನ್ನು ಬಿಡಲಾಗಿದೆ. ಅಲ್ಲದೆ ಮುಗಿಲೆತ್ತರ ಮರಗಳು, ಮನತಣಿಸುವ ಗಿಡಗಳು ಇವೆ. ಇವೆಲ್ಲವೂ ಪ್ರವಾಸಿ ತಾಣದ ಅಂದವನ್ನು ದುಪ್ಪಟ್ಟುಗೊಳಿಸಿದೆ.

(ಮೊದಲ ಪುಟದಿಂದ) ರಾಜಾಸೀಟ್‌ಗೆ ಬರುವವರು ಇಲ್ಲಿನ ಅಂದ ಸವಿಯಲೇಬೇಕು. ಮಡಿಕೇರಿಯ ನಿವಾಸಿಗಳಿಗೂ ವಾಯುವಿಹಾರ ಮಾಡಲು ಈ ಪ್ರದೇಶ ಸೂಕ್ತವಾಗಿದೆ. ಹಿಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕೊಡುಗೆ ಇದಾಗಿದೆ.

ವ್ಯೂ ಪಾಯಿಂಟ್

ರಾಜಾಸೀಟ್‌ನಲ್ಲಿ ಈಗಾಗಲೇ ಒಂದು ವ್ಯೂ ಪಾಯಿಂಟ್ ಇದೆ. ಆದರೆ, ಆವರಣದೊಳಗೆ ಮತ್ತೆ ಮೂರು ವ್ಯೂ ಪಾಯಿಂಟ್ ತಲೆ ಎತ್ತಲಿವೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಇದು ಕೂಡಾ ರಾಜಾಸೀಟ್‌ನ ಕೇಂದ್ರ ಬಿಂದುವಾಗಿದರಲ್ಲಿ ಸಂಶಯವಿಲ್ಲ. ವ್ಯೂ ಪಾಯಿಂಟ್‌ನಿAದ ನೋಡಿದರೆ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.

ಹೊಸ ವ್ಯೂ ಪಾಯಿಂಟ್‌ಗಳು ಸುಂದರವಾಗಿ ನಿರ್ಮಾಣವಾಗುತ್ತಿವೆ. ಮೆಟ್ಟಿಲುಗಳನ್ನು ನಡೆದು ಸಾಗಿದರೆ ಹಂಚಿನ ಜೋಪಾಡಿಗಳು ಇವೆ. ಅಲ್ಲಿ ನಿಂತರೆ ನಿಸರ್ಗದ ಸೊಬಗಿನ ದರ್ಶನವಾಗುತ್ತದೆ. ಪ್ರಕೃತಿ ಪ್ರಿಯರು ಇಲ್ಲಿಗೆ ಆಗಮಿಸಿದರೆ ಪ್ರಕೃತಿ ಸೌಂದರ್ಯ ಸವಿಯದೆ ಹೋಗಲು ಮನಸ್ಸೇ ಬರುವುದಿಲ್ಲ. ಅದಲ್ಲದೆ ಮಂಗಳೂರು ರಸ್ತೆಯ ತಿರುವು, ಸುತ್ತ ಹಚ್ಚ ಹಸಿರು ನೋಡಿದಷ್ಟು ಖುಷಿ ಸಿಗುತ್ತದೆ. ಇನ್ನೂ ಮಂಜು ತುಂಬಿದರAತೂ ‘‘ ಮಡಿಕೇರಿ ಮೇಲ್ ಮಂಜು’’ ಹಾಡು ಗುನುಗಿದಂತಾಗುತ್ತದೆ.

ರಾಜಾಸೀಟ್, ಕೂರ್ಗ್ ವಿಲೇಜ್ ಹಾಗೂ ನೆಹರು ಮಂಟಪ ಹಾಗೂ ಹೊಸ ವ್ಯೂ ಪಾಯಿಂಟ್ ಜಾಗಗಳು ಸ್ಥಳೀಯರಿಗೆ ವಾಯುವಿಹಾರ ಮಾಡಲು ಸೂಕ್ತ ಪ್ರದೇಶವಾಗಿವೆ. - ಹೆಚ್.ಜೆ. ರಾಕೇಶ್