ನಾಪೋಕ್ಲು, ಜು. ೧೧: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಮಡಿಕೇರಿ ವಲಯದ ವತಿಯಿಂದ ರಾಜೇಶ್ವರಿ ನಗರ, ಗಾಳಿಬೀಡು, ತ್ಯಾಗರಾಜನಗರ, ತಾಳತ್ತಮನೆ ಸೇರಿದಂತೆ ಮಡಿಕೇರಿ ನಗರ ಕಾರ್ಯಕ್ಷೇತ್ರದ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ನಗರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಂದು ಬಡವರು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ.

ಸಂಘದಲ್ಲಿ ಮಹಿಳೆಯರೇ ಹೆಚ್ಚಾಗಿದ್ದು ಒಂದು ಉತ್ತಮ ಬೆಳವಣಿಗೆ ಇಂತಹ ಸಂಘವು ತಮ್ಮ ಲಾಭಾಂಶವನ್ನು ಸಂಘಗಳಿಗೆ ನೀಡುತ್ತಿರುವುದು ಸಂತೋಷದ ವಿಷಯ ಎಂದರು

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಪದ್ಮಯ್ಯ,ಐಡಿಬಿಐ ಬ್ಯಾಂಕಿನ ಪ್ರತಿನಿಧಿ ವೇಣುಬಾಬು, ಒಕ್ಕೂಟದ ಅಧ್ಯಕ್ಷೆ ಕುಸುಮ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಹರೀಶ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ನಾಜು ವಂದಿಸಿದರು. ವಲಯದ ೩೭೧ ಸಂಘಗಳಿಗೆ ಒಟ್ಟು ೯೬ ಲಕ್ಷ ೫೦ ಸಾವಿರದ ಎಂಟುನೂರ ಐವತ್ತೆಂಟು ರೂ. ಲಾಭಾಂಶ ವಿತರಿಸಲಾಯಿತು.

ರಾಜೇಶ್ವರಿ ಸಂಪಾಜೆ ಎ ಮತ್ತು ಸಂಪಾಜೆ ಬಿ ಪ್ರಗತಿಬಂಧು ಒಕ್ಕೂಟದ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಭರತ್ ವಿತರಿಸಿದರು. ಒಕ್ಕೂಟದ ಅಧ್ಯಕ್ಷರುಗಳಾದ ಹೊನ್ನಪ್ಪ, ಪುಷ್ಪಾವತಿ, ಗ್ರಾಮ ವಿಕಾಸ ಸಂಯೋಜಕಿ ಮೀನಾಕುಮಾರಿ, ಯೋಜನಾಧಿಕಾರಿ ಪದ್ಮಯ್ಯ, ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ಹರೀಶ್ ಕೆ., ಸೇವಾಪ್ರತಿನಿಧಿ ಪುಷ್ಪಾವತಿ ಪಾಲ್ಗೊಂಡಿದ್ದರು.