ಗೋಣಿಕೊಪ್ಪಲು, ಜು. ೧೧: ತನ್ನ ಎಮ್ಮೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರೈತನಿಗೆ ೮ ತಿಂಗಳ ನಂತರ ಪರಿಹಾರ ಕೊಡಿಸುವಲ್ಲಿ ಕೊಡಗು ಜಿಲ್ಲಾ ರೈತ ಸಂಘ ಯಶಸ್ವಿಯಾಗಿದೆ.
೨೦೨೦ ಸೆಪ್ಟೆಂಬರ್ ತಿಂಗಳ ೨೨ ರಂದು ದ. ಕೊಡಗಿನ ಬಾಳೆಲೆ ಹೋಬಳಿಯ ದೇವನೂರು ಗ್ರಾಮದ ರೈತರಾದ ಆದೇಂಗಡ ದಿನೇಶ್ ಅವರಿಗೆ ಸೇರಿದ ಮೂರು ಎಮ್ಮೆಗಳನ್ನು ಸಮೀಪದ ಭತ್ತದ ಗದ್ದೆಗಳಲ್ಲಿ ಮೇಯಲು ಬಿಟ್ಟಿದ್ದರು.
ಈ ವೇಳೆ ಗದ್ದೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯೊAದು ತುಂಡಾಗಿ ಬಿದ್ದು ಹೋಗಿತ್ತು. ಮೇಯಲು ಬಿಟ್ಟ ಎಮ್ಮೆಗಳು ತೆರಳಿದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗಳು ತಗುಲಿ ಮೂರು ಎಮ್ಮೆಗಳು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದವು.
ಈ ವೇಳೆ ಎಮ್ಮೆಯ ಮಾಲೀಕ ಆದೇಂಗಡ ದಿನೇಶ್ ಸಂಬAಧಿಸಿದ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಸಕಾಲದಲ್ಲಿ ಸ್ಪಂದನೆ ದೊರಕಿರಲಿಲ್ಲ.
ತದನಂತರ ರೈತ ಸಂಘ ಪದಾಧಿಕಾರಿಗಳಾದ ಮೇಚಂಡ ಕಿಶಮಾಚಯ್ಯ ಆಲೆಮಾಡ ಮಂಜುನಾಥ್ ಹಾಗೂ ಪುಚ್ಚಿಮಾಡ ರಾಯ್ ಮಾದಪ್ಪ ಅವರಿಗೆ ವಿಷಯ ತಿಳಿಸಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ರೈತ ಸಂಘ ಮುಖಂಡರು, ಚೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಲ್ಲಿ ಯಶಸ್ವಿಯಾಗಿದ್ದರು.
ತದನಂತರದಲ್ಲಿ ರೈತ ಮುಖಂಡರು ಇಂತಹ ಅನಾಹುತಕ್ಕೆ ಚೆಸ್ಕಾಂ ಇಲಾಖೆಯ ನಿರ್ಲಕ್ಷö್ಯವೇ ಕಾರಣ ಎಂದು ಆರೋಪಿಸಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಚೆಸ್ಕಾಂ ಇಲಾಖೆಯ ಮೇಲೆ ಮೊಕದಮ್ಮೆ ದಾಖಲಿಸಿದ್ದರು.
ಪೊಲೀಸ್ ಇಲಾಖೆಯ ನಿರ್ದೇಶನದ ಮೇಲೆ ಪಶುವೈದ್ಯರು ಆಗಮಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವೇಳೆ ಗ್ರಾಮ ರೈತ ಮುಖಂಡರು ಚೆಸ್ಕಾಂ ಇಲಾಖೆಯ ನಿರ್ಲಕ್ಷö್ಯದ ಬಗ್ಗೆ ಅಸಮಾಧಾನ ಹೊರಹಾಕಿ ಪರಿಹಾರ ನೀಡಲು ಒತ್ತಾಯ ಮಾಡಿದ್ದರು. ಆದರೆ ಪರಿಹಾರ ನೀಡಲು ನಿರಾಕರಿಸ ಲಾಗಿತ್ತು. ಹಲವು ತಿಂಗಳು ಕಳೆದರೂ ಎಮ್ಮೆಗಳನ್ನು ಕಳೆದುಕೊಂಡ ರೈತನಿಗೆ ಪರಿಹಾರ ಲಭ್ಯವಾಗಿರಲಿಲ್ಲ.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಸನ ಜಿಲ್ಲೆಯಲ್ಲಿರುವ ಚೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ನೊಂದ ರೈತನಿಗೆ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು. ಅಲ್ಲದೆ ಕೊಡಗಿನ ರೈತರು ಎದುರಿಸುತ್ತಿರುವ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದರು.
ಇವರ ಮಾತಿಗೆ ಮನ್ನಣೆ ನೀಡಿದ ಚೆಸ್ಕಾಂ ಹಿರಿಯ ಅಧಿಕಾರಿಗಳು ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ತದನಂತರ ಸ್ಥಳಿಯ ಮಟ್ಟದ ಅಧಿಕಾರಿಗಳಿಂದ ಈ ಬಗ್ಗೆ ಅಗತ್ಯ ದಾಖಲೆ, ವಿವರ ಪಡೆದ ಹಾಸನ ಚೆಸ್ಕಾಂ ಅಧಿಕಾರಿಗಳು ಮೂರು ಎಮ್ಮೆಗಳು ವಿದ್ಯುತ್ ಅವಘಡದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಒಂದು ಎಮ್ಮೆಗೆ ತಲಾ ೪೦ ಸಾವಿರದಂತೆ ಮೃತಪಟ್ಟ ಮೂರು ಎಮ್ಮೆಗಳಿಗೆ ಒಟ್ಟು ರೂ. ೧.೨೦ ಲಕ್ಷ ಪರಿಹಾರ ಬಿಡುಗಡೆ ಮಾಡಿ ನೊಂದ ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.
ಜಿಲ್ಲೆಯಲ್ಲಿ ಚೆಸ್ಕಾಂ ಇಲಾಖೆಯ ವತಿಯಿಂದ ಜಾನುವಾರು ಮೃತಪಟ್ಟ ಘಟನೆಗೆ ಇಷ್ಟು ದೊಡ್ಡದ ಪರಿಹಾರ ಪಡೆದುದರಲ್ಲಿ ಇದು ಪ್ರಥಮ ಪ್ರಕರಣವಾಗಿದೆ. ರೈತ ಸಂಘದ ಹೋರಾಟ ಮೂಲಕ ಎಮ್ಮೆಗಳನ್ನು ಕಳೆದುಕೊಂಡ ರೈತನಿಗೂ ನ್ಯಾಯ ದೊರಕಿದಂತಾಗಿದೆ.
ನೊAದ ರೈತ ದಿನೇಶ್ ಮಾತನಾಡಿ, ಇಲಾಖೆಯ ವತಿಯಿಂದ ಪರಿಹಾರ ಸಿಗುವ ಆಶಾಭಾವನೆ ಇರಲಿಲ್ಲ. ಎಂಟು ತಿಂಗಳ ನಂತರ ಬ್ಯಾಂಕ್ ಖಾತೆಗೆ ಹಣ ಜಮಾವಾಗಿರುವುದು ಕಂಡು ಆಶ್ಚರ್ಯವಾಯಿತು. ರೈತ ಸಂಘದ ಹೋರಾಟದ ಫಲವಾಗಿ ರೂ. ೧.೨೦ ಲಕ್ಷ ಪರಿಹಾರ ಲಭಿಸಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-ಹೆಚ್.ಕೆ. ಜಗದೀಶ್