ಮಡಿಕೇರಿ, ಜು. ೧೧: ಚಿತ್ರರಂಗದಲ್ಲಿ ಪ್ರಸ್ತುತ ಭಾರೀ ಸುದ್ದಿಯಲ್ಲಿರುವ ಕೊಡಗಿನ ಬೆಡಗಿ ಅರಳು ಹುರಿದಂತೆ ಪಟಪಟನೆ ಮಾತನಾಡುವ ತಾರೆ ಹರ್ಷಿಕಾ ಪೂಣಚ್ಚ ಇದೀಗ ಭೋಜ್‌ಪುರಿ ಬಂಧುವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಕೊರೊನಾ ಪರಿಸ್ಥಿತಿಯ ನಡುವೆ ಸಾಮಾಜಿಕ ಕಾಳಜಿಯೊಂದಿಗೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ರಾಜ್ಯದಲ್ಲಿ ಮನೆ ಮಾತಾಗಿರುವ ಹರ್ಷಿಕಾ ಇದರ ನಡುವೆಯೂ ಭೋಜ್‌ಪುರಿ ಭಾಷಾ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶದ ಸಂತಸದಲ್ಲಿದ್ದಾರೆ. ಈಗಾಗಲೇ ಭೋಜ್‌ಪುರಿ ಭಾಷೆಯಲ್ಲಿನ ಚಿತ್ರವೊಂದರಲ್ಲಿ ಈಕೆ ನಟಿಸಿದ್ದು, ಈ ಚಿತ್ರ ತೆರೆಗೆ ಬರುವುದಷ್ಟೇ ಬಾಕಿ ಇದೆ. ಭೋಜ್‌ಪುರಿ ಭಾಷಾ ಚಿತ್ರರಂಗದಲ್ಲಿನ ಸ್ಟಾರ್‌ನಟ ಪವನ್‌ಸಿಂಗ್ ಒಟ್ಟಿಗೆ ‘‘ಹಮ್ ಹೈ ರಾಹಿ ಪ್ಯಾರ್‌ಕೆ’’ ಚಿತ್ರದಲ್ಲಿ ‘‘ಚಿಟ್ಟೆ’’ ಖ್ಯಾತಿಯ ಹರ್ಷಿಕಾ ನಟಿಸಿದ್ದು, ಇದರ ಬಿಡುಗಡೆಗೆ ಕೊರೊನಾ ಅಡ್ಡಿಯಾಗಿದೆ. ಇದರ ಬೆನ್ನಲ್ಲೇ ಈಕೆಗೆ ಮತ್ತೊಂದು ಭೋಜ್‌ಪುರಿ ಚಿತ್ರದಲ್ಲೂ ಅವಕಾಶ ದೊರೆತಿದ್ದು, ಇದರ ಚಿತ್ರೀಕರಣವೂ ಶುರುವಾಗಿದೆ. ಮತ್ತೋರ್ವ ಸ್ಟಾರ್ ನಟ, ಯುವ ಸಮೂಹದಲ್ಲಿ ಚಿಂಟು ಎಂದು ಪ್ರಖ್ಯಾತಿ ಪಡೆದಿರುವ ಪ್ರದೀಪ್ ಪಾಂಡೆಯೊAದಿಗೆ ‘‘ಸಜನ್ ರೆ ಝೂಟ್ ಮತ್ ಬೋಲೋ’’ ಎಂಬ ಚಿತ್ರ ಎರಡನೆಯದ್ದಾಗಿದೆ.

ಚೊಚ್ಚಲ ಭೋಜ್‌ಪುರಿ ಚಿತ್ರ ಭಾರೀ ಸದ್ದು ಮಾಡಿದ್ದು, ಇದರ ಟ್ರೇಲರ್ ಕೂಡ ರಿಲೀಸ್ ಆಗಿದೆ. ಅಪಾರ ಸಂಖ್ಯೆಯ ಚಿತ್ರಾಭಿಮಾನಿಗಳು ಟ್ರೇಲರ್ ವೀಕ್ಷಣೆ ಮಾಡಿದ್ದು, ಚಿತ್ರ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದೆ.

ಈಗಾಗಲೇ ಹರ್ಷಿಕಾ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ನಟಿಸಿದ್ದಾಳೆ. ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಹರ್ಷಿಕಾ ಕನ್ನಡದೊಂದಿಗೆ, ತಮಿಳು, ಮಲೆಯಾಳಂ, ತೆಲುಗು, ತುಳು, ಕೊಂಕಣಿ, ಕೊಡವ ಭಾಷೆ, ಇದೀಗ ಭೋಜ್‌ಪುರಿ ಭಾಷೆ ಸೇರಿ ೮ ಭಾಷೆಗಳಲ್ಲಿ ನಟಿಸಿದ್ದಾಳೆ. ಹತ್ತು ಭಾಷೆಗಳಲ್ಲಿ ನಟಿಸುವ ಕನಸ್ಸು ಈಕೆಯದ್ದಾಗಿದ್ದು, ಇದಕ್ಕೆ ಪೂರಕವಾಗಿ ಮರಾಠಿ ಹಾಗೂ ಪಂಜಾಬಿ ಭಾಷಾ ಚಿತ್ರರಂಗದಿAದಲೂ ‘ಆಫರ್’ ಬಂದಿದೆ. ಈ ಎರಡು ಭಾಷೆಗಳಲ್ಲೂ ಅಭಿನಯಿಸುವ ಹಂಬಲ ಹೊಂದಿರುವ ಈಕೆ ಇದು ಸಾಕಾರಗೊಂಡಲ್ಲಿ ಹತ್ತು ಭಾಷೆಗಳಲ್ಲಿ ನಟಿಸಿದ ವಿಶೇಷ ತಾರೆಯಾಗಿ ಗುರುತಿಸಲ್ಪಡಲಿದ್ದಾಳೆ. ಕೊರೊನಾ ಸಂಕಷ್ಟದಲ್ಲಿರುವ ಜನತೆಗೆ ಸೇವೆ - ಸಹಕಾರ ನೀಡುವುದರೊಂದಿಗೆ ವೃತ್ತಿ ಜೀವನವಾದ ಚಿತ್ರರಂಗದಲ್ಲೂ ಹರ್ಷಿಕಾ ಪ್ರಸ್ತುತ ‘ಬ್ಯುಸಿ’ಯಾಗಿದ್ದು, ಕನ್ನಡದಲ್ಲೂ ಮೂರು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. -ಶಶಿ