ಕಣಿವೆ, ಜು. ೧೧: ಜೂನ್ ೩೦ ರಂದು ಹತ್ಯೆಗೊಳಗಾಗಿದ್ದ ಮಣಜೂರು ಗ್ರಾಮದ ವೃದ್ಧೆ ಯನ್ನು ಕೊಂದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಗೌರಮ್ಮ (೮೩) ಅವರನ್ನು ಕೊಲೆಗೈದಿದ್ದು ಅವರ ಮೊಮ್ಮಗನೆ ಎಂದು ತಿಳಿದು ಬಂದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದ್ದ ಪ್ರಕರಣದ ನೈಜಾಂಶ ಬಯಲಾಗಿದೆ.

ಮೂಲತಃ ಪಿರಿಯಾಪಟ್ಟಣ ತಾಲೂಕು ದೊಡ್ಡಕಮರವಳ್ಳಿ ನಿವಾಸಿ ಮಂಜುನಾಥ್ (೪೦) ಬಂಧಿತ ಆರೋಪಿಯಾಗಿದ್ದಾನೆ. ಮಣಜೂರು ಗ್ರಾಮದ ತನ್ನ ಅಜ್ಜಿ ಗೌರಮ್ಮನ ಮನೆ ಸಮೀಪದ ಮನೆಯೊಂದನ್ನು ಬಾಡಿಗೆಗೆ ಪಡೆದು ಕೆಲವರ್ಷಗಳಿಂದ ಆರೋಪಿ ವಾಸವಿದ್ದ ಎನ್ನಲಾಗಿದೆ.

ಗೌರಮ್ಮಳನ್ನು ಮೊಮ್ಮಗ ಮಂಜುನಾಥ್ ದನಗಳ ಮೂಗಿಗೆ ಕಟ್ಟುವ ಮೂಗುದಾರ ಬಳಸಿ ಕೊಲೆಗೈದಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಅದಲ್ಲದೆ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಯಾರೋ ಕಳ್ಳರು ಹಣಕ್ಕಾಗಿ ದುಷ್ಕೃತ್ಯ ಮಾಡಿದ್ದಾರೆ ಎಂದು ಪ್ರಕರಣವನ್ನು ತಿರುಚುವ ಕೆಲಸಕ್ಕೆ ಆತ ಕೈ ಹಾಕಿದ್ದ. ಜುಲೈ ೨ ರಂದು ಗೌರಮ್ಮ ಸಾವನ್ನಪ್ಪಿರುವ ವಿಚಾರ ಅಕ್ಕಪಕ್ಕದವರಿಗೆ ತಿಳಿದು ಬಂದಿದೆ. ತದನಂತರ ಕುಶಾಲನಗರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದರು.

ಅಂದು ಏನಾಯ್ತು..?

ಗೌರಮ್ಮ ಕೊಲೆಯಾದ ಜೂನ್ ೩೦ ರಂದು ಬೆಳಗ್ಗೆ ಆರೋಪಿ ರಸ್ತೆಯಲ್ಲಿ

(ಮೊದಲ ಪುಟದಿಂದ) ಹೋಗುತ್ತಿದ್ದಾಗ ಈತನನ್ನು ಕಂಡ ಅಜ್ಜಿ ಗೌರಮ್ಮ, ಈತನನ್ನು ನೋಡಿ ತಮ್ಮಷ್ಟಕ್ಕೆೆ ಗೊಣಗಿಕೊಂಡಿದ್ದರAತೆ. ಇದನ್ನು ಕಂಡ ಮಂಜುನಾಥ ನೇರವಾಗಿ ತನ್ನೂರು ದೊಡ್ಡಕಮರವಳ್ಳಿಗೆ ತೆರಳಿ ತನ್ನ ಮನೆಯಲ್ಲಿನ ಅಂಗಡಿಯೊಳಗೆ ಮಾರಾಟಕ್ಕೆ ಇಟ್ಟಿದ್ದ ದನಗಳ ಮೂಗಿಗೆ ಕಟ್ಟುವ ಮೂಗುದಾರಗಳನ್ನು ತಂದು ಅಂದು ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಅಜ್ಜಿಯೊಬ್ಬಳೇ ಮನೆಯೊಳಗಿದ್ದಾಗ ಮನೆಯೊಳಕ್ಕೆ ತೆರಳಿ ಅವರನ್ನು ಎಳೆದಾಡಿ, ಮೂಗುದಾರದಿಂದ ಕೈ ಹಾಗು ಕಾಲುಗಳನ್ನು ಕಟ್ಟಿ ಮಂಚದ ಮೇಲೆ ಎತ್ತಿ ಹಾಕಿ ಮಲಗುತ್ತಿದ್ದ ಹಾಸಿಗೆಯನ್ನು ಮುಖದ ಮೇಲೆ ಅದುಮಿ ಸಾಯಿಸಿದ್ದಾಗಿ ಪೋಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಅಷ್ಟೇ ಅಲ್ಲದೇ ಮೊಮ್ಮಗನಾಗಿ ನಾನು ಕೃತ್ಯವೆಸಗಿದ್ದು ಗೊತ್ತಾಗೋದು ಬೇಡ. ಯಾರೋ ಕಳ್ಳರು ಬಂದು ಹೀಗೆ ಮಾಡಿದ್ದಾರೆ ಅಂದುಕೊಳ್ಳಲಿ ಎಂದು ಮನೆಯಲ್ಲಿನ ಕಪಾಟುಗಳನ್ನೆಲ್ಲ ಎಳೆದು ಚೆಲ್ಲಾಪಿಲ್ಲಿ ಮಾಡಿದ್ದಲ್ಲದೇ, ಕಿಟಕಿಯೊಂದನ್ನು ಎಳೆದು ಬೀಳಿಸಿದ್ದಾಗಿ ಹೇಳಿದ್ದಾನೆ. ಜೂನ್ ೩೦ ರ ಬುಧವಾರ ಜರುಗಿದ ಘಟನೆ ಮೂರು ದಿನಗಳ ಬಳಿಕ ಅಂದರೆ ಜುಲೈ ೨ರ ಶುಕ್ರವಾರ ಸಂಜೆಯ ವೇಳೆಗೆ ಮಣಜೂರು ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು. ಅಲ್ಲದೇ ಗ್ರಾಮಸ್ಥರಲ್ಲಿ ಭಯದ ವಾತಾವರಣವನ್ನೂ ಮೂಡಿಸಿತ್ತು. ಬಳಿಕ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಹಾಗು ತಂಡ ಭೇಟಿ ನೀಡಿ ಘಟನೆಯನ್ನು ಪರಿಶೀಲಿಸಿತ್ತು.

ನಾಟಕವಾಡಿದ್ದ ಆರೋಪಿ

ಕೊಲೆ ವಿಚಾರ ತಿಳಿದು ಇಡೀ ಗ್ರಾಮ ಭಯಭೀತಗೊಂಡ ಸಂದರ್ಭ ಆರೋಪಿ ಮಂಜುನಾಥ್ ತನ್ನ ದೊಡ್ಡಮ್ಮನ ಮಗನೊಂದಿಗೆ ಈ ರೀತಿಯ ಕೃತ್ಯ ಉತ್ತರ ಭಾರತದಲ್ಲಿ ನಡೆಯುತ್ತದೆ. ನಾನು ಯೋಧನಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭ ಈ ರೀತಿಯ ಘಟನೆ ಕಣ್ಣಾರೆ ಕಂಡಿದ್ದೇನೆ ಎಂದು ನಾಟಕದ ಮಾತುಗಳನ್ನಾಡಿದ್ದ. ಅದಲ್ಲದೆ ಪೊಲೀಸರು ಬಂದ ಸಂದರ್ಭದಲ್ಲಿಯೂ ಆತನ ವರ್ತನೆ ಬದಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಅಜ್ಜಿಯನ್ನು ನೋಡಿಕೊಳ್ಳಲು ಬಂದ

ಮೃತೆ ಗೌರಮ್ಮನ ಓರ್ವ ಪುತ್ರ ಈಶ್ವರ ಕಳೆದ ೧೪ ವರ್ಷಗಳ ಹಿಂದೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದು, ಬಳಿಕ ೧೧ ವರ್ಷಗಳ ಹಿಂದೆ ಗೌರಮ್ಮರ ಪತಿಯೂ ನಿಧನ ಹೊಂದಿದ್ದರು. ನಾಲ್ವರು ಪುತ್ರಿಯರಲ್ಲಿ ಮೊದಲ ಪುತ್ರಿ ಸುನಂದ ಎಂಬವರನ್ನು ಮಣಜೂರು ಸಮೀಪದ ಕಾವೇರಿ ನದಿಯಾಚೆಯ ದೊಡ್ಡಕಮರವಳ್ಳಿ ಎಂಬ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ಇದ್ದ ಒಬ್ಬ ಸಹೋದರ ಹಾಗು ತಂದೆಯ ನಿಧನದ ನಂತರ ಮನೆಯಲ್ಲಿ ಅಮ್ಮ ಒಬ್ಬರೇ ಏಕಾಂಗಿಯಾಗಿರುತ್ತಾರೆ. ಜೊತೆಗೆ ೫ ಎಕರೆ ಕೃಷಿ ಭೂಮಿ ಬೇರೆ ಇದೆ. ಅದನ್ನೆಲ್ಲಾ ನಿರ್ವಹಣೆ ಮಾಡಲು ಅಜ್ಜಿಗೆ ಆಗಲ್ಲ. ನೀನು ಅಲ್ಲಿಗೆ ಹೋಗುವಂತೆ ಮಗ ಮಂಜುನಾಥ್ ಅನ್ನು ಕೆಲವು ವರ್ಷಗಳ ಹಿಂದೆ ಮಣಜೂರಿಗೆ ಸುನಂದÀ ಕಳುಹಿಸಿದ್ದರು ಎನ್ನಲಾಗಿದೆ.

ಮೊದಲ ಮಗಳ ಮಗನಾದ ಮಂಜುನಾಥ್ ಎರಡು ವರ್ಷವಿರುವಾಗಲೇ ಮಣಜೂರಿನ ತನ್ನ ಅಜ್ಜಿಯ ಮನೆಯಲ್ಲಿದ್ದ. ಅದಲ್ಲದೆ ಆತನನ್ನು ಅಜ್ಜಿ ಸಾಕಿ ಸಲಹಿದ್ದರು. ಕೊನೆಗೆ ಗ್ರಾಮದಲ್ಲಿಯೇ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸಿದ್ದರು. ಇದೀಗ ಆತನೇ ಅಜ್ಜಿಯ ಜೀವವನ್ನು ತೆಗೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಸಿಆರ್‌ಪಿಎಫ್ ಯೋಧನೂ ಆಗಿದ್ದ

ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿದ ಆರೋಪಿ ಮಂಜುನಾಥ್ ವೀರಶೈವ ಸಮಾಜದ ಹೆಸರಿಗೆ ಬದಲಾಗಿ ವಿಶ್ವ ಕರ್ಮ ಸಮಾಜಕ್ಕೆ ಸೇರಿದವ ಎಂಬ ತಪ್ಪು ಮಾಹಿತಿಯನ್ನು ನೀಡಿ ಸೇನೆಗೂ ಸೇರಿ ಆರೇಳು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಎಂದು ತಿಳಿದು ಬಂದಿದೆ.

ನಂತರ ಈತ ನೀಡಿದ ತಪ್ಪು ಮಾಹಿತಿಯ ಪ್ರಮಾದ ಸೇನೆಗೆ ತಿಳಿದ ಬಳಿಕ ಈತನನ್ನು ಕರ್ತವ್ಯದಿಂದ ವಜಾಗೊಳಿಸಿ ದೂರು ದಾಖಲಿಸಲಾಗಿತ್ತು. ತದನಂತರ ನಾವು ಎಷ್ಟೆಲ್ಲಾ ಕಷ್ಟ ಪಟ್ಟು ಈತನನ್ನು ಪಾರು ಮಾಡಿದೆವು. ಇವತ್ತು ಇಂತಹ ಕೃತ್ಯ ಮಾಡಿದ್ದಾನಲ್ಲಾ.. ಹೇಗೆ ಇವನನ್ನು ಕ್ಷಮಿಸೋದು? ಎಂದು ಮೃತ ಗೌರಮ್ಮನ ಕೊನೆಯ ಅಳಿಯ ಮೈಸೂರಿನಲ್ಲಿ ನೆಲೆಸಿರುವ ಚಂದ್ರಕಾAತ್ ಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ವಯೋವೃದ್ಧೆ ಗೌರಮ್ಮನ ಜೊತೆ ಆರೋಪಿ ಮಂಜುನಾಥ್ ಇದ್ದಾಗ ನನಗೆ ಆಸ್ತಿ ಬರೆದುಕೊಡು ಅಂತಾ ಆಗಾಗ್ಗೆ ಪೀಡಿಸುತ್ತಿದ್ದ. ತೊಂದರೆ ಕೊಡುತ್ತಾ ಅಜ್ಜಿಯ ಮೇಲೆ ಹಲ್ಲೆ ಕೂಡ ಮಾಡುತ್ತಿದ್ದ. ಕೊನೆಗೆ ಇವನ ಹಿಂಸೆ ತಾಳಲಾರದೇ ಅಜ್ಜಿ ಕುಶಾಲನಗರ ಪೊಲೀಸರಿಗೂ ಈತನ ಬಗ್ಗೆ ಈ ಹಿಂದೆ ದೂರು ನೀಡಿದ್ದರು ಎಂದು ಗೌರಮ್ಮ ಅವರ ಎರಡನೆಯ ಮಗಳ ಮಗ ಶ್ರೀಕಾಂತ್ ಹೇಳುತ್ತಾರೆ.

ಗ್ರಾಮದಲ್ಲೇ ಬಾಡಿಗೆ ಮನೆಯಲ್ಲಿ ವಾಸ

ಇಷ್ಟೆಲ್ಲ ಗಲಾಟೆಯ ನಂತರ ಆತನನ್ನು ಅಜ್ಜಿ ಗೌರಮ್ಮ ಮನೆಯಿಂದ ಹೊರ ಹಾಕಿದ್ದು, ಬಳಿಕ ಅಲ್ಲಿಯೇ ಸಮೀಪದ ಸಿ.ಎನ್.ಮಂಜುನಾಥ ಎಂಬವರ ಮನೆಯನ್ನು ಬಾಡಿಗೆಗೆ ಪಡೆದ ಈತ ಪತ್ನಿ ಹಾಗು ಪುಟ್ಟ ಮಗುವಿನೊಂದಿಗೆ ವಾಸವಿದ್ದ. ಪತ್ನಿ ಶಿರಂಗಾಲದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಈತ ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾಫಿ ಕ್ಯೂರಿಂಗ್ ವರ್ಕ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ತನ್ನ ಅಜ್ಜಿ ಗೌರಮ್ಮನ ಮನೆಯ ಸನಿಹವೇ ಈತ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದುದು ಗೌರಮ್ಮರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಡಿವೈಎಸ್‌ಪಿ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಮಹೇಶ್, ಕುಶಾಲನಗರ ಗ್ರಾಮಾಂತರ ಪಿಎಸ್‌ಐ ಶಿವಶಂಕರ್, ಎಎಸ್‌ಐ ಗೋಪಾಲ, ಸಿಬ್ಬಂದಿಗಳಾದ ಸಜಿ, ಶ್ರೀನಿವಾಸ್, ಮಂಜುನಾಥ, ಶನಂತ, ಪ್ರಿಯಕುಮಾರ್, ಸುದೀಶ್ ಕುಮಾರ್, ರಂಜಿತ್, ಲೋಕೇಶ್, ಪ್ರಕಾಶ್, ಟೆಕ್ನಿಕಲ್ ಸೆಲ್‌ನ ರಾಜೇಶ್, ಗಿರೀಶ್ ಇದ್ದರು. ಪ್ರಕರಣವನ್ನು ಬೇಧಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

-ವರದಿ : ಕೆ.ಎಸ್.ಮೂರ್ತಿ