ಕೂಡಿಗೆ, ಜು. ೧೦: ಕೋವಿಡ್-೧೯ ರ ನಡುವೆ ತಾ. ೧೯ ಮತ್ತು ೨೨ ರಂದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ನಡೆಯಲಿರುವ ಎಸ್.ಎಸ್. ಎಲ್.ಸಿ. ಪರೀಕ್ಷೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ.) ವತಿಯಿಂದ ಬೆಂಗಳೂರಿನ ಡಿ.ಎಸ್.ಇ.ಆರ್. ಟಿ.ಯ ಸ್ಟುಡಿಯೋದಿಂದ ರಾಜ್ಯಾದ್ಯಂತ ನೇರ ಪ್ರಸಾರವಾದ ವೀಡಿಯೋ ಸಂವಾದ ಕಾರ್ಯಕ್ರಮ ದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ವೀಡಿಯೋ ಸಂವಾದ ನಡೆಸಿದರು.

ಕೊಡಗಿನಲ್ಲಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ತೆರೆಯ ಲಾಗಿದ್ದ ಸ್ವೀಕಾರ ಕೇಂದ್ರದಲ್ಲಿರುವ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹಾಗೂ ಎಸ್.ಎಸ್. ಎಲ್.ಸಿ. ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಿ ಅವರು ಪರೀಕ್ಷೆ ಕುರಿತು ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳು ಹಾಗೂ ಸಂದೇಹಗಳಿಗೆ ಉತ್ತರಿಸಿದರು. ಕೋವಿಡ್ ಹಿನ್ನೆಲೆ ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಎರಡು ದಿನಗಳಿಗೆ ಸೀಮಿತಗೊಳಿಸಿ ಪರೀಕ್ಷಾ ಸ್ವರೂಪವನ್ನು ಬದಲಾಯಿಸಿ ಸರಳಗೊಳಿಸಲಾಗಿದೆ. ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಯಾವುದೇ ಆತಂಕ, ಭಯಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಸಚಿವ ಸುರೇಶ್‌ಕುಮಾರ್ ಕರೆ ನೀಡಿದರು.

ಕೂಡಿಗೆ ಡಯಟ್ ಕೇಂದ್ರದಲ್ಲಿ ಡಯಟ್ ಪ್ರಾಂಶುಪಾಲರಾದ, ಡಿಡಿಪಿಐ ಎ. ಶ್ರೀಧರನ್, ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಯಾವುದೇ ಭಯ ಹೊಂದದೇ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸುಗಳಿಸ ಬೇಕು ಎಂದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ಶಿವಕುಮಾರ್, ಕುಮಾರಸ್ವಾಮಿ, ಉಪನ್ಯಾಸಕರಾದ ಸಿದ್ದೇಶಿ, ಗೀತಾ, ಕುಮಾರಸ್ವಾಮಿ, ಸೋಮವಾರಪೇಟೆ ತಾಲೂಕು ನೋಡಲ್ ಅಧಿಕಾರಿ ಕೆ.ಬಿ. ರಾಧಾಕೃಷ್ಣ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.

ಮಡಿಕೇರಿಯಲ್ಲಿ ನಡೆದ ಸಂವಾದದಲ್ಲಿ ತಾಲೂಕು ನೋಡಲ್ ಅಧಿಕಾರಿ ಎಂ.ಹೆಚ್. ಹರೀಶ್, ವೀರಾಜಪೇಟೆಯಲ್ಲಿ ನಡೆದ ಸಂವಾದದಲ್ಲಿ ತಾಲೂಕು ನೋಡಲ್ ಅಧಿಕಾರಿ ಪಿ.ಎಂ. ಅಯ್ಯಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.