ಕುಶಾಲನಗರ, ಜು. ೮: ಉತ್ತರ ಭಾರತದಿಂದ ಕುಶಾಲನಗರದ ಗಡಿ ಮೂಲಕ ಕೊಡಗು ಜಿಲ್ಲೆಗೆ ಆಗಮಿಸಿದ್ದ ೫ ಮಂದಿ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ ೬ ದಿನಗಳ ಅವಧಿಯಲ್ಲಿ ಕುಶಾಲನಗರದ ಅಂತರರಾಜ್ಯ ಪ್ರಯಾಣಿಕರ ಕೋವಿಡ್ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದು, ಅವರುಗಳನ್ನು ಸ್ಥಳೀಯ ಕೋವಿಡ್ ಕಾಳಜಿ ಕೇಂದ್ರದಲ್ಲಿ ದಾಖಲಿಸಲಾಗಿದೆ.
೧೦ ದಿನಗಳಿಂದ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಮತ್ತಿತರ ರಾಜ್ಯಗಳ ಸಾವಿರಾರು ಸಂಖ್ಯೆಯ ವಲಸೆ ಕಾರ್ಮಿಕರು ಜಿಲ್ಲೆಯ ವಿವಿಧ ಕಡೆಯ ತೋಟಗಳಿಗೆ ಬಂದಿದ್ದು, ಇವರುಗಳು ಪೊಲೀಸರ
(ಮೊದಲ ಪುಟದಿಂದ) ಕಣ್ತಪ್ಪಿಸಿ ಜಿಲ್ಲೆಗೆ ನುಸುಳುತ್ತಿರುವುದು ದಿನನಿತ್ಯದ ದೃಶ್ಯವಾಗಿದೆ.ಕುಶಾಲನಗರ ತಪಾಸಣಾ ಕೇಂದ್ರದಲ್ಲಿ ಇದುವರೆಗೆ ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರು ತನಕ ರೈಲು ಮೂಲಕ ಬರುವ ಕಾರ್ಮಿಕರ ಕುಟುಂಬ ಅಲ್ಲಿಂದ ಗಡಿಭಾಗದ ಕೊಪ್ಪ ತನಕ ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಸಿ ಆಟೋರಿಕ್ಷಾ ಸೇರಿದಂತೆ ಖಾಸಗಿ ವಾಹನಗಳ ಮೂಲಕ ಜಿಲ್ಲೆಯ ಗಡಿ ದಾಟುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಇವರುಗಳನ್ನು ಕೊಡಗು ಗಡಿದಾಟಿಸುವ ದಂಧೆಯಲ್ಲಿ ಕೆಲವರು ತೊಡಗಿದ್ದು, ಕೊರೊನಾ ಪರೀಕ್ಷೆಗೆ ಒಳಗಾಗದೆ ತೋಟಗಳಿಗೆ ತಲುಪಲು ಸಹಾಯ ಮಾಡುವ ಅಂತರರಾಜ್ಯ ದಂಧೆ ಇರುವ ಬಗ್ಗೆ ಸ್ಥಳೀಯ ಜನರು ಸಂಶಯ ವ್ಯಕ್ತ ಪಡಿಸಿದ್ದಾರೆ. ತಡರಾತ್ರಿಯಲ್ಲಿ ಗಡಿಭಾಗದ ಕೊಪ್ಪ ಬಳಿ ನೂರಾರು ಮಂದಿ ವಲಸೆ ಕಾರ್ಮಿಕರು ಜಿಲ್ಲೆಗೆ ಬರಲು ಕಾದು ಕುಳಿತುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬಹುತೇಕ ಕಾರ್ಮಿಕರು ಪೊಲೀಸರ ಕೈಗೆ ಸಿಕ್ಕಿಬಿದ್ದಲ್ಲಿ ಮಾತ್ರ ಕೋವಿಡ್ ಪರೀಕ್ಷೆಗೆ ಒಳಪಡುತ್ತಿದ್ದಾರೆ ಹೊರತು ಹಲವರು ಗುಂಪು ಗುಂಪಾಗಿ ಪರ್ಯಾಯ ಮಾರ್ಗ ಮೂಲಕ ಜಿಲ್ಲೆಯ ತೋಟಗಳನ್ನು ಸೇರುವಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಸ್ಥಳೀಯ ಆಡಳಿತ ಗಡಿಭಾಗದ ಕೇಂದ್ರಗಳಲ್ಲಿ ಎಚ್ಚರಿಕೆ ತಪ್ಪಿದಲ್ಲಿ ಮುಂದೆ ಮತ್ತೆ ಕೊರೊನಾ ಆತಂಕ ಎದುರಿಸಬೇಕಾಗಬಹುದು ಎಂಬುದು ಸ್ಥಳೀಯ ನಾಗರಿಕರ ಆತಂಕವಾಗಿದೆ. -ಸಿಂಚು