ಮಡಿಕೇರಿ, ಜು. ೮: ಕೊಡಗು ಪ್ರೆಸ್ ಕ್ಲಬ್ ಸದಸ್ಯತ್ವ ನವೀಕರಣ, ಹೊಸ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕಾ ಭವನದಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು, ಜು.೨೦ ರೊಳಗೆ ಅರ್ಜಿ ಸಲ್ಲಿಸಬೇಕೆಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್.ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಲಬ್‌ನ ಸಾಮಾನ್ಯ ಸದಸ್ಯರಾಗುವವರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಸಂಪಾದಕರು ಅಥವಾ ಜಿಲ್ಲಾ ವರದಿಗಾರರಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯ. ಸದಸ್ಯರಾಗುವವರು ಪ್ರಸ್ತುತ ಪ್ರಕಟವಾಗುತ್ತಿರುವ ಪತ್ರಿಕೆ ಅಥವಾ ಪ್ರಸಾರವಾಗುತ್ತಿರುವ ಸುದ್ದಿವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಸಾಮಾನ್ಯ ಸದಸ್ಯರಾಗುವವರು ಕಡ್ಡಾಯವಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ/ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯದಿದ್ದರೇ ಕ್ಲಬ್‌ನ ಆಜೀವ ಸದಸ್ಯತ್ವ ಮತ್ತು ಸಾಮಾನ್ಯ ಸದಸ್ಯತ್ವ ರದ್ದಾಗುತ್ತದೆ.

ಸಾಮಾನ್ಯ ಸದಸ್ಯತ್ವ ಪಡೆಯಲು ವೃತ್ತಿನಿರತ ಪತ್ರಕರ್ತರು, ಪತ್ರಿಕಾ ಸಂಪಾದಕರು, ಉಪಸಂಪಾದಕರು, ಪತ್ರಿಕಾ ಅಧಿಕೃತ ಛಾಯಾಚಿತ್ರಕಾರರು, ಮಾಧ್ಯಮ ಪ್ರತಿನಿಧಿಗಳು, ವ್ಯವಸ್ಥಾಪಕ ಸಂಪಾದಕರು, ಪತ್ರಿಕಾ ಮಾಲೀಕತ್ವ ಹೊಂದಿರುವ ಸಂಪಾದಕರು ಅರ್ಹರಾಗಿರುತ್ತಾರೆ. ಪ್ರೆಸ್ ಕ್ಲಬ್‌ನ ಸಾಮಾನ್ಯ ಸದಸ್ಯರಾಗಿ ಸತತ ನಾಲ್ಕು ಬಾರಿ ನವೀಕರಿಸಿದ ಸದಸ್ಯರು ಆಜೀವ ಸದಸ್ಯರಾಗುತ್ತಾರೆ.

ಸಹ ಸದಸ್ಯತ್ವ ಪಡೆಯಲು ವಾರ್ತಾ ಇಲಾಖೆ ಅಧಿಕಾರಿ, ಸಹಾಯಕ ಅಧಿಕಾರಿ, ಪತ್ರಿಕಾ ಕಲಾವಿದರು, ಪತ್ರಿಕಾ ಕಚೇರಿಯ ವ್ಯವಸ್ಥಾಪಕರು, ಜಾಹೀರಾತು ವ್ಯವಸ್ಥಾಪಕರು, ಪ್ರಸರಣಾ ವ್ಯವಸ್ಥಾಪಕರು, ಮುದ್ರಕರು, ಪ್ರಕಾಶಕರು, ಕರಡು ತಿದ್ದುಪಡಿಗಾರರು, ಪತ್ರಕರ್ತ ಸಂಘದ ಸಲಹೆಗಾರರು, ಅರೆ ಸರ್ಕಾರಿ/ ಸರ್ಕಾರಿ/ ನೌಕರರಾಗಿರುವ ಪತ್ರಕರ್ತರು, ಮೂಲತಃ ಕೊಡಗಿನವರಾಗಿದ್ದುಕೊಂಡು ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು ಅರ್ಹರಾಗಿರುತ್ತಾರೆ.

ಕ್ಲಬ್‌ನ ಹೊಸ ಮತ್ತು ನವೀಕರಣ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿದಾಗ ಆ ವ್ಯಕ್ತಿ ಪತ್ರಿಕೋದ್ಯಮಕ್ಕೆ ಸಂಬAಧಿಸಿದವರೇ ಅಲ್ಲವೇ ಎಂಬ ಸಂಶಯ ಆಡಳಿತ ಮಂಡಳಿಗೆ ಬಂದಾಗ ಸದಸ್ಯತ್ವ ರದ್ದು ಮಾಡುವ, ತಿರಸ್ಕರಿಸುವ ಅಧಿಕಾರ ಅಂತಿಮವಾಗಿ ಆಡಳಿತ ಮಂಡಳಿಗೆ ಇರುತ್ತದೆ. ಮೂವರು ಸದಸ್ಯರ ಸಹಿ ಮತ್ತು ಅನುಮೋದನೆ ಮೇಲೆ ಸದಸ್ಯತ್ವ ನೀಡಲಾಗುತ್ತದೆ.

ಹೊಸದಾಗಿ ಆಜೀವ ಸದಸ್ಯತ್ವಕ್ಕೆ ೨ ಸಾವಿರ, ಸಾಮಾನ್ಯ ಹಾಗೂ ಸಹ ಸದಸ್ಯತ್ವಕ್ಕೆ ೫೮೦ ರೂಪಾಯಿ ಶುಲ್ಕ ಪಾವತಿಸಬೇಕು. ಆಜೀವ ಸದಸ್ಯರು ಸದಸ್ಯತ್ವ ನವೀಕರಣಕ್ಕೆ ೧೦೦ ರೂಪಾಯಿ ಶುಲ್ಕ ಪಾವತಿಸಬೇಕು. ಅರ್ಜಿ ನಮೂನೆಗೆ ರೂ. ೧೦ ನೀಡಬೇಕು. ಹೊಸದಾಗಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ೨ ಹಾಗೂ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ೧ ಭಾವಚಿತ್ರ ಸಲ್ಲಿಸಬೇಕು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ೧ ಗಂಟೆಯವರೆಗೆ ಪತ್ರಿಕಾ ಭವನದಲ್ಲಿ ಅರ್ಜಿ ನಮೂನೆ ವಿತರಣೆ ಮತ್ತು ಸ್ವೀಕಾರ ಮಾಡಲಾಗುತ್ತದೆ.