ಬೆಂಗಳೂರು, ಜು. ೮: ರಾಜ್ಯ ಸರಕಾರವು ಕೊಡಗು ಜಿಲ್ಲೆ ಹೊರತುಪಡಿಸಿ ಇತರ ಎಲ್ಲ ಜಿಲ್ಲೆಗಳಿಗೆ ಅನ್ವಯವಾಗುವಂತೆ ಜುಲೈ ೩ ರಂದು ಕೋವಿಡ್ ನಿರ್ಬಂಧ ಸಡಿಲಿಕೆ ಆದೇಶವನ್ನು ಹೊರಡಿಸಿತ್ತು. ಕೊಡಗು ಜಿಲ್ಲೆಗೆ ಜಿಲ್ಲಾಧಿಕಾರಿಯವರು ಈ ಹಿಂದಿನ ನಿರ್ಬಂಧಗಳನ್ನು ತಾ. ೧೯ ರವರೆಗೆ ಮುಂದುವರಿಸಿ ಕೆಲವೊಂದನ್ನು ಮಾತ್ರ ಸಡಿಲಗೊಳಿಸಿ ತಾ. ೩ ರಂದು ಆದೇಶಿಸಿದ್ದರು. ಆದರೆ, ಇದೀಗ ರಾಜ್ಯದ ಇತರ ಜಿಲ್ಲೆಗಳಂತೆ ತಾ. ೩ ರ ಆದೇಶದಲ್ಲಿ ಒಳಗೊಂಡ ಸಡಿಲಿಕೆಗಳನ್ನು ಕೊಡಗು ಜಿಲ್ಲೆಗೂ ಅನ್ವಯವಾಗುವಂತೆ ಸರಕಾರ ನೂತನ ಆದೇಶವನ್ನು ಇಂದು ಹೊರಡಿಸಿದೆ. ಸರಕಾರದ ನಿರ್ದೇಶನಕ್ಕೆ ಪೂರಕ ಆದೇಶವನ್ನು ಜಿಲ್ಲ್ಲಾ ಮಟ್ಟದಲ್ಲಿಯೂ ಬಿಡುಗಡೆ ಮಾಡಲಿರುವದಾಗಿ ಜಿಲ್ಲಾಡಳಿತದಿಂದ “ಶಕ್ತಿ” ಗೆ ಮಾಹಿತಿ ಲಭ್ಯವಾಗಿದೆ.
ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಇಳಿಮುಖವಾಗುತ್ತಿದೆ. ಜಿಲ್ಲಾಡಳಿತವು ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಅಧಿಕೃತ ವರದಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.೨.೭೭ ಆಗಿದೆ . ಕಳೆದ ಒಂದು ವಾರದಿಂದ ಪಾಸಿಟಿವಿಟಿ ದರ ಸರಾಸರಿ ಶೇ. ೪.೭೭ ಆಗಿದೆ. ಈ ಕುರಿತು ರಾಜ್ಯ ಮಟ್ಟಕ್ಕೆ ಜಿಲ್ಲಾಡಳಿತದಿಂದ ವಿವರ ವರದಿ ಕಳುಹಿಸಲಾಗಿತ್ತು.
ರಾಜ್ಯದ ಕಂದಾಯ ಇಲಾಖಾ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಅವರು ಇಂದು ಹೊರಡಿಸಿರುವ ಆದೇಶದಲ್ಲಿ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ಸರಾಸರಿ ಕೋವಿಡ್ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಾ.೩ ರಂದು ಲಾಕ್‌ಡೌನ್ ಸಡಿಲಿಕೆ ಮಾಡಿದ್ದು ಇದೀಗ ಕೊಡಗಿಗೂ ಅನ್ವಯವಾಗುವಂತೆ ಅದೇ ಆದೇಶÀವನ್ನು ಜಾರಿಗೊಳಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಈ ಆದೇಶವು ತಾ. ೧೯ ರವರೆಗೆ ಜಾರಿಯಲ್ಲಿರುತ್ತದೆ. ಅದರ ಅನ್ವಯ ನಿರ್ಬಂಧ ಸಡಿಲಿಕೆ ವಿವರ ಈ ಕೆಳಗಿನಂತಿದೆ.
೧. ಎಲ್ಲ ಅಂಗಡಿಗಳು, ರೆಸ್ಟೋರೆಂಟ್‌ಗಳು, ಖಾಸಗಿ ಕಚೇರಿಗಳು ಮಾಲ್‌ಗಳನ್ನು (ರಾತ್ರಿ ೯ರವರೆಗೆ ಮಾತ್ರ) ತೆರೆಯಬಹುದು.
(ಮೊದಲ ಪುಟದಿಂದ) ಆದರೆ, ಕೋವಿಡ್ ನಿಯಮಗಳನ್ನು ಪಾಲಿಸದಿದ್ದಲ್ಲಿ ವಿಕೋಪ ನಿರ್ವಹಣಾ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು. ೨. ಸಾರ್ವಜನಿಕ ಸಾರಿಗೆ ಶೇ. ೧೦೦ ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ. ೩. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಅವಕಾಶವಿದೆೆ. ಆದರೆ, ಸೇವೆಗಳನ್ನು ನಡೆಸಲು ಅವಕಾಶವಿಲ್ಲ. ೪. ಮದುವೆ ಹಾಗೂ ಇನ್ನಿತರ ಕೌಟುಂಬಿಕ ಶುಭ ಸಮಾರಂಭಗಳಿಗೆ ೧೦೦ ಜನರೊಂದಿಗೆ ಭಾಗವಹಿಸಬಹುದು.ಆದರೆ, ಕೋವಿಡ್ ನಿಯಮ ಪಾಲಿಸಬೇಕು.೫. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು, ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ೬. ಕ್ರೀಡಾ ಸಂಕೀರ್ಣ ಹಾಗೂ ಸ್ಟೇಡಿಯಂಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಪ್ರೇಕ್ಷಕರಿಗೆ ಅವಕಾಶವಿಲ್ಲ. ೭. ಅಂತ್ಯ ಸಂಸ್ಕಾರಕ್ಕೆ ೨೦ ಸದಸ್ಯರು ಭಾಗವಹಿಸಬಹುದು. ಆದರೆ, ಕೋವಿಡ್ ನಿಯಮ ಪಲನೆ ಅತ್ಯಗತ್ಯ ೮. ಕೊರೊನಾ ಕರ್ಫ್ಯೂ (ನೈರ್ಟ್ ಕರ್ಫ್ಯೂ) ರಾತ್ರಿ ೯.೦೦ ರಿಂದ ಬೆಳಿಗ್ಗೆ ೫.೦೦ ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ೯. ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.
೧೦. ಸಾಮಾಜಿಕ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರ ಸಮಾರಂಭಗಳಿಗೆ ಅವಕಾಶವಿಲ್ಲ. ೧೧. ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನಿಸಲಾಗುವುದು.೧೨. ಪಬ್‌ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ೧೩. ಚಿತ್ರಮಂದಿರಗಳು ಕಾರ್ಯನಿರ್ವಹಣೆಗೆ ಅವಕಾಶವಿಲ್ಲ.
ಈ ನಡುವೆ ತಾ. ೩ ರಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. ೧೦೦ ರಷ್ಟು ಸಿಬ್ಬಂದಿಗಳೊAದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ಘೋಷಿಸಿದ್ದರು.
ಕೋವಿಡ್-೧೯ ನಿಯಂತ್ರಿಸುವ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆ ಕಡೆಗೆ ಗಮನ ಹರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ವಿನಂತಿಸಲಾಗಿದೆ.