ಗೋಣಿಕೊಪ್ಪಲು, ಜು. ೯: ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ ತಿತಿಮತಿ ಸಮೀಪ ಆನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದ ವಲಯಾರಣ್ಯಾಧಿಕಾರಿ ವೈ.ಕೆ. ಕಿರಣ್‌ಕುಮಾರ್ ಅವರಿಗೆ ಸಂಸ್ಥೆಯ ಅಧ್ಯಕ್ಷೆ ಟಿ.ಎಂ.ನೀತಾ ಕಾವೇರಮ್ಮ ಸ್ಥಳೀಯ ನಾಟಿ ತಳಿ ಬಿದಿರಿನ ಬೀಜವನ್ನು ವಿತರಿಸಿದರು.
ಪ್ರತೀ ಕೆ.ಜಿ. ಬಿದಿರಿನ ಬೀಜದಲ್ಲಿ ಸುಮಾರು ೬೦೦೦ ಬಿದಿರು ಸಸ್ಯಗಳನ್ನು ಬೆಳೆಸಬಹುದಾಗಿದ್ದು, ೩ ಕೆ.ಜಿ. ಬಿದಿರಿನ ಬೀಜ ವಿತರಿಸಲಾಗಿದೆ ಎಂದು ಹೇಳಿದ ಅವರು, ನಾಗರಹೊಳೆ ಅಭಯಾ ರಣ್ಯದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬಿದಿರು ವಿನಾಶದ ಅಂಚಿನಲ್ಲಿದ್ದು, ಕಾಡ್ಗಿಚ್ಚಿನ ದುಷ್ಪರಿಣಾಮದಿಂದಾಗಿಯೂ ಬಿದಿರು ಮೆಳೆ ನಾಶವಾಗಿದ್ದು, ಕಾಡಾನೆಗಳ ಮೇವಿಗೆ ಕೊರತೆಯಾಗಿದೆ. ಈ ನಿಟ್ಟಿನಲ್ಲಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳಿಗೆ ಸೂಕ್ತ ಆಹಾರ ಸಿಗುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭ ಮಾಹಿತಿ ನೀಡಿದ ವನ್ಯಜೀವಿ ವಿಭಾಗದ ಆರ್.ಎಫ್.ಓ. ಕಿರಣ್‌ಕುಮಾರ್ ಅವರು, ಆನೆಗಳಿಗೆ ಹುಲ್ಲುಗಾವಲುಗಳು ಅಗತ್ಯವಾಗಿದ್ದು, ಸಾಕಾನೆ ಶಿಬಿರದ ಆಸುಪಾಸಿನಲ್ಲಿ ನೂರಾರು ಕೆ.ಜಿ. ಹುಲ್ಲು ಬೀಜವನ್ನು ಪಸರಿಸಿ ಹುಲ್ಲುಗಾವಲು ಮಾರ್ಪಡಿಸುವ ಪ್ರಯತ್ನವೂ ಸಾಗಿದೆ ಎಂದು ಹೇಳಿದರು.
ಈ ಸಂದರ್ಭ ತಿತಿಮತಿ ವಲಯಾರಣ್ಯಾಧಿಕಾರಿ ಪಿ.ಎ. ತೀರ್ಥ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ರೋಟರಿ ಮಾಹಿತಿ ಕೈಪಿಡಿ ಸಂಪಾದಕಿ ಲತಾ ಬೋಪಣ್ಣ, ನಿರ್ದೇಶಕ ಅಜ್ಜಿಕುಟ್ಟೀರ ಸಜ್ಜನ್ ಚಂಗಪ್ಪ, ಮಾಜಿ ರೋಟರಿ ಅಧ್ಯಕ್ಷ ಕಾಡ್ಯಮಾಡ ನವೀನ್, ಎಂ.ಕೆ. ಡೀನಾ, ಕಿಶೋರ್ ಮಾದಪ್ಪ (ಸಮುದಾಯ ಸೇವಾ ನಿರ್ದೇಶಕ), ಟಿ.ವಿ. ಮೋಹನ್, ಅರುಣ್ ತಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.