ವೀರಾಜಪೇಟೆ, ಜು. ೭: ಗಡಿ ದಾಟಲು ಬಿಡುವಂತೆ ತಪಾಸಣಾ ಸಿಬ್ಬಂದಿಯೆAದು ತಿಳಿದು ತಹಶೀಲ್ದಾರರಿಗೇ ಲಂಚದ ಆಮಿಷ ನೀಡಿರುವದು ಒಂದೆಡೆಯಾದರೆ., ಗಡಿ ದಾಟಲು ಬಿಡದ ಕಾರಣಕ್ಕೆ ತಡೆದ ಪೊಲೀಸರ ಮೇಲೆಯೇ ಬೈಕ್ ಹಾಯಿಸಲು ಯತ್ನಿಸಿದ ಪ್ರಸಂಗ ಇನ್ನೊಂದೆಡೆ., ಇನ್ನೂ ವಿಚಿತ್ರವೆಂದರೆ ಹೆಣ್ಣು ನೋಡಲು ಹೋಗಬೇಕು, ಅರ್ಧಗಂಟೆ ನಮ್ಮನ್ನು ಒಳಗಡೆ ಬಿಡಿ ಎಂದು ಗೋಗರೆಯುತ್ತಿದ್ದ ದೃಶ್ಯ..!
ಇದು ಕೊಡಗಿನ ಗಡಿಭಾಗ ಮಾಕುಟ್ಟ ಚೆಕ್ಪೋಸ್ಟ್ನಲ್ಲಿ ಕೇರಳದಿಂದ ಕೊಡಗು ಜಿಲ್ಲೆಗೆ ನುಸುಳಲು ಯತ್ನಿಸುತ್ತಿರುವವರು ಮಾಡಿದ ಅವಾಂತರಗಳು..! ತಹಶೀಲ್ದಾರ್ ಆರ್. ಯೋಗಾನಂದ ಅವರು ಇಂದು ಚೆಕ್ಪೋಸ್ಟ್ಗೆ ತೆರಳಿ ಪರಿಶೀಲಿಸಿದ ಸಂದರ್ಭ ಇಂತಹ ವಿಚಿತ್ರ ಘಟನೆಗಳು ನಡೆದವು. ಹೇಗಾದರೂ ಮಾಡಿ ಜಿಲ್ಲೆಯೊಳಗೆ ನುಸುಳಲು ಪ್ರಯತ್ನಿಸುವವರ ಈ ರೀತಿಯ ಪ್ರಯತ್ನವನ್ನು ವಿಫಲಗೊಳಿಸಲಾಯಿತು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಕೊಡಗು ಜಿಲ್ಲೆಯನ್ನು ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿ ಅಥವಾ ಎರಡು ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ತಹಶೀಲ್ದಾರ್ ಆರ್. ಯೋಗಾನಂದ್ ಸ್ಪಷ್ಟ ಪಡಿಸಿದ್ದಾರೆ.
(ಮೊದಲ ಪುಟದಿಂದ) ಕೇರಳ-ಕೊಡಗು ಜಿಲ್ಲೆಯ ಗಡಿಭಾಗವಾದ ಮಾಕುಟ್ಟ ಚೆಕ್ಪೋಸ್ಟ್ಗೆ ಇಂದು ತಹಶೀಲ್ದಾರರು ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಕಾರಣಕ್ಕೂ ಲೋಪ ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಕಂದಾಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸಿದರು. ಮಾಕುಟ್ಟ ಚೆಕ್ಪೋಸ್ಟ್ನಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ಪರಿಶೀಲನೆ ಮಾಡಿದಾಗ ಹೆಚ್ಚಿನ ವಾಹನ ಚಾಲಕರಲ್ಲಿ ಆರ್.ಟಿ.ಪಿ.ಸಿಆರ್ ಅಥವಾ ಎರಡು ಲಸಿಕೆಯ ಪ್ರಮಾಣ ಪತ್ರ ಕಂಡು ಬಾರದ ಕಾರಣ ಜಿಲ್ಲೆಯಿಂದ ಹೊರ ಕಳಿಸುವಂತೆ ಪೊಲೀಸರಿಗೆ ಸೂಚಿಸಿದರು. ೧೪ ದಿನಗಳ ಆರ್.ಟಿ.ಪಿ.ಸಿಆರ್ ವರದಿ ಒಂದೆರಡು ದಿನಗಳು ಮೀರಿದ್ದರೆ, ಸರಕು ಸಾಗಾಣಿಕಾ ವಾಹನ ಚಾಲಕರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಸ್ಥಳದಲ್ಲಿಯೇ ರ್ಯಾಪಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದರೆ ಅಂvಹÀವರನ್ನು ಪ್ರಯಾಣಿಸಲು ಅವಕಾಶ ನೀಡಿ ಎಂದು ತಪಾಸಣಾ ಸಿಬ್ಬಂದಿಗಳಿಗೆ ಆದೇಶ ನೀಡಿದರು.
ವಾಹನ ಹಾಯಿಸಲು ಯತ್ನ
ತಲಚೇರಿಯ ಪಯ್ಯನ್ನೂರಿನಲ್ಲಿ ರೋಡ್ ರೋಲರ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನದ ಜಂಶಿರ್ ಎಂಬಾತ ತಪಾಸಣಾ ಪೊಲೀಸ್ ಸಿಬ್ಬಂದಿಗಳ ಮೇಲೆ ಬೈಕ್ ಹಾಯಿಸಿ ತಪಾಸಣೆಯಿಂದ ತಪ್ಪಿಸಿಕೊಂಡು ಎರಡು ಕಿ.ಮೀ. ದೂರ ತೆರಳಿದ್ದಾನೆ. ಅವನನ್ನು ಹಿಂಬಾಲಿಸಿ ಕರೆತಂದ ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ತಾಯಿ ಮೃತ ಪಟ್ಟಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಪೊಲೀಸರು ಆತನ ಕುಟುಂಬ ವರ್ಗದವರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ತಾಯಿ ಜೀವಂತವಾಗಿರುವುದು ತಿಳಿದು ಬಂತು. ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಹಶೀಲ್ದಾರಿಗೆ ಲಂಚ..!
ಕೇರಳದ ಶಹಾದ್ ಹಾಗೂ ಶಫಿಯಾನ್ ಎಂಬವರು ಬೆಂಗಳೂರಿನ ಹೆಣ್ಣೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಯಾವುದೇ ದಾಖಲಾತಿ ಹಾಗೂ ಪ್ರಮಾಣಪತ್ರ ಹೊಂದದೆ ಜಿಲ್ಲೆಯ ಮೂಲಕ ಬೈಕ್ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ಸಂದÀರ್ಭ ಚೆಕ್ಪೋಸ್ಟ್ನಲ್ಲಿ ಸ್ವತಃ ತಪಾಸಣೆಯಲ್ಲಿ ನಿರತರಾಗಿದ್ದ ತಹಶೀಲ್ದಾರ್ ಯೋಗಾನಂದ್ ಯುವಕರ ಬಳಿ ಪ್ರಮಾಣ ಪತ್ರ ಕೇಳಿದ್ದಾರೆ. ಅವರನ್ನು ತಹಶೀಲ್ದಾರ್ ಎಂದು ಅರಿಯದ ಯುವಕರು ತಲಾ ಒಬ್ಬರಿಗೆ ಒಂದು ಸಾವಿರದಂತೆ ಹಣ ನೀಡುವುದಾಗಿ ಲಂಚ ನೀಡಲು ಮುಂದಾದರು. ಇದರಿಂದ ಕೋಪಗೊಂಡ ತಹಶೀಲ್ದಾರ್ ಯುವಕರನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿ ಇವರ ವಿರುದ್ಧ ಪ್ರಕರಣ ದಾಖಲಿಸು ವಂತೆ ಆದೇಶ ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದರು..
ಹೆಣ್ಣು ನೋಡಲು ಕಾತರ
ಇಬ್ಬರು ಯುವಕರು ಬೈಕಿನಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಹೆಣ್ಣು ನೋಡಲು ಹೋಗುತ್ತಿರುವುದಾಗಿ ಇದಕ್ಕೆ ಅವಕಾಶ ನೀಡುವಂತೆ ಮಾಕುಟ್ಟ ಚೆಕ್ಪೋಸ್ಟ್ ಬಳಿ ತಪಾಸಣಾ ಸಿಬ್ಬಂದಿಯನ್ನು ಗೋಗರೆಯುತ್ತಿರುವುದು ಕಂಡು ಬಂತು. ಕೇರಳದ ತಳಿಪರಂಬುವಿನ ಶಂಷುದ್ದಿನ್ ಹಾಗೂ ಕೌಸರ್ ಎಂಬ ಇಬ್ಬರು ಯುವಕರು ಬೈಕ್ ಮೂಲಕ ಜಿಲ್ಲೆಗೆ ಪ್ರವೇಶಕ್ಕೆ ಯತ್ನಿಸಿದ್ದಾರೆ. ಅವರ ಬಳಿ ಯಾವುದೇ ಪ್ರಮಾಣ ಪತ್ರ ಇಲ್ಲದ್ದರಿಂದ ಸಿಬ್ಬಂದಿಗಳು ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ವಿಚಲಿತಗೊಂಡ ಯುವಕರು ಕೇವಲ ೨ ಗಂಟೆಗಳ ಕಾಲ ಅವಕಾಶ ನೀಡಿದರೆ ಪಟ್ಟಣಕ್ಕೆ ತೆರಳಿ ಹೆಣ್ಣು ನೋಡಿಕೊಂಡು ಬರುವುದಾಗಿ ಪರಿಪರಿಯಾಗಿ ಸಿಬ್ಬಂದಿಗಳನ್ನು ಬೇಡುತ್ತಿದ್ದರು. ಕೊನೆಗೂ ಅವರಿಗೆ ಹೆಣ್ಣು ನೋಡುವ ಭಾಗ್ಯ ಲಭಿಸಲಿಲ್ಲ. ಸಿಬ್ಬಂದಿಗಳು ಅವರನ್ನು ವಾಪಸ್ ಕಳುಹಿಸಿದರು.
ಸಿಬ್ಬಂದಿಗಳ ಕೊರತೆ
ಮಾಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ನೂರಾರು ವಾಹನÀಗಳು ಸಂಚರಿಸುತ್ತಿವೆ. ಕೋವಿಡ್ ಸಂದರ್ಭ ಆಗಿರುವುದರಿಂದ ಗಡಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ತಪಾಸಣೆ ಮಾಡಲು ಕೇವಲ ಇಬ್ಬರು ಪೊಲೀಸರನ್ನು ನಿಯೋಜಿಸಿರುವುದು ಕಂಡು ಬಂತು. ಅವರ ಬಳಿ ವಾಹನಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸುವುದು ಅತ್ಯವಶ್ಯಕವಾಗಿದೆ.
-ಸಚಿತ್ರ ವರದಿ: ಪಿ.ಪಿ.ಸಿ.