ಕುಶಾಲನಗರ, ಜು. ೭: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಮತ್ತು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕುಶಾಲನಗರದಲ್ಲಿ ಸೈಕಲ್ ಜಾಥಾ ನಡೆಯಿತು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾರ್ಯಕರ್ತರು ಸೈಕಲ್ ಜಾಥಾ ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿಯಿಂದ ಮುಖ್ಯ ರಸ್ತೆಯಲ್ಲಿ ತೆರಳಿ ಕುಶಾಲನಗರ ಗಣಪತಿ ದೇವಾಲಯವರೆಗೆ ಸಾಗಿ ಮಾನವ ಸರಪಳಿ ರಚಿಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಧರ್ಮಜ ಉತ್ತಪ್ಪ ಪಕ್ಷದ ರಾಜ್ಯ ವರಿಷ್ಠರ ಸೂಚನೆಯಂತೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಬೆಲೆ ಏರಿಕೆ ವಿರುದ್ಧ ಮತ್ತು ಜನ ಸಾಮಾನ್ಯರ ಸಮಸ್ಯೆಗಳನ್ನುಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ವಿಧಾನಪರಿಷತ್ ಸದಸ್ಯ ರಘು ಆಚಾರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಸಾಮಾನ್ಯರ ಬಗ್ಗೆ ಕನಿಷ್ಟ ಕಾಳಜಿ ಹೊಂದಿಲ್ಲ. ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದರಲ್ಲದೆ ಇದೀಗ ಜನತೆ ಬದಲಾವಣೆ ಬಯಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್, ಸತೀಶ್, ಲೋಕೇಶ್ ಕುಮಾರ್, ನಗರಾಧ್ಯಕ್ಷ ಶರೀಫ್ ಇಬ್ರಾಹಿಂ, ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕೆ.ಕೆ. ಮಂಜುನಾಥ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಗಳಾದ ಪ್ರದೀಪ್ ರೈ ಪಾಂಬಾರ್, ವೆಂಕಪ್ಪ ಗೌಡ, ಮಂಜುಳ ರಾಜ್, ಪ್ರಮುಖರಾದ ಕೆ.ಪಿ. ಚಂದ್ರಕಲಾ, ಸುರೈಯ್ಯ ಅಬ್ರಾರ್, ಮುನೀರ್ ಅಹಮ್ಮದ್, ಮಂಜುನಾಥ್ ಗುಂಡೂರಾವ್, ರಾಜಾರಾವ್, ವಿ.ಪಿ. ಶಶಿಧರ್, ಜೋಸೆಫ್ ವಿಕ್ಟರ್ ಸೋನ್ಸ್, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಸ್ಮಾನ್ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಇದ್ದರು.