ಕಣಿವೆ, ಜು. ೬: ಕಳೆದ ೨೫ ದಿನಗಳಿಂದ ಮಳೆಯಿಲ್ಲದೇ ಒಣಗುತ್ತಿದ್ದ ಜೋಳದ ಬೆಳೆಗೆ ಮಂಗಳವಾರ ಸಂಜೆ ಸುರಿದ ಮಳೆ ಒಣಗುತ್ತಿದ್ದ ಬೆಳೆಗೆ ಸಂಜೀವಿನಿ ಯಂತಾಗಿದೆ. ಅತ್ತ ಮಲೆನಾಡು ಅಲ್ಲದ ಇತ್ತ ಬಯಲು ಸೀಮೆಯೂ ಅಲ್ಲದ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆ ನೀರಾವರಿ ಪ್ರದೇಶದ ಚಿಕ್ಕಳುವಾರ, ದೊಡ್ಡಳುವಾರ, ಬಸರಿಗುಪ್ಪೆ, ಅಳಿಲುಗುಪ್ಪೆ, ಸಿದ್ದಲಿಂಗಪುರ, ಯಡವನಾಡು, ಅತ್ತೂರು ಮೊದಲಾದ ಗ್ರಾಮಗಳ ನೂರಾರು ಕೃಷಿಕರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವ ಮುಸುಕಿನ ಜೋಳದ ಫಸಲಿಗೆ ಮಂಗಳವಾರ ಸುರಿದ ಮಳೆ ಹೊಸ ಜೀವ ಕಳೆಯನ್ನು ತಂದಿದೆ.

ಆರಿದ್ರಾ ಮಳೆ ಸುರಿಯದೇ ಕೈಕೊಟ್ಟರೂ ಕೂಡ ಆರಂಭದ ಮೊದಲ ದಿನವೇ ಸುರಿದ ಪುನರ್ವಸು ರೈತಾಪಿಗಳಲ್ಲಿ ಬಹು ನಿರೀಕ್ಷೆ ಮೂಡಿಸಿದಂತಾಗಿದೆ.

ಕೂಡಿಗೆ, ಹೆಬ್ಬಾಲೆ, ಸೀಗೆಹೊಸೂರು, ಮದಲಾಪುರ, ಭುವನಗಿರಿ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿ ಮಳೆ ಸಹಿತವಾಗಿ ಭಾರೀ ಮಳೆ ಸುರಿದಿದೆ.

ಬಹುದಿನಗಳಿಂದ ಮಳೆಯಿಲ್ಲದೆ ಮುಸುಕಿನ ಜೋಳದ ಬೆಳೆ ಒಣಗುತ್ತಿತ್ತು. ಅಲ್ಲದೆ ಅನೇಕ ರೈತರು ಜೋಳದ ಬೆಳೆಗೆ ರಾಸಾಯನಿಕ ಗೊಬ್ಬರ ಹಾಕಲಾಗಿತ್ತು. ಗೊಬ್ಬರ ಉಷ್ಣಾಂಶ ಮತ್ತು ಬಿಸಿಲಿನ ತಾಪದಿಂದ ಜೋಳದ ಬೆಳೆ ಉತ್ತಮವಾಗಿ ಬೆಳೆಯುವುದರ ಬದಲು ಸೊರಗಿಹೋಗಿತ್ತು. ಇಂದು ಸುರಿದ ಮಳೆಯಿಂದಾಗಿ ಈ ವ್ಯಾಪ್ತಿಯ ಜೋಳ ಬೆಳೆದ ರೈತರಿಗೆ ಅನುಕೂಲವಾಗಿದೆ.

ಇದರ ಜೊತೆಗೆ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಈ ಭಾಗದ ರೈತರು ಬೇಸಾಯ ಮಾಡಿರುತ್ತಾರೆ. ಅವರುಗಳು ಕೊಳವೆ ಬಾವಿಯಿಂದ ನೀರು ಹರಿಸುವುದು ತಪ್ಪಿದಂತೆ ಆಗಿದೆ. ಮಳೆಯಿಂದಾಗಿ ರೈತರಿಗೆ ಹರ್ಷದಾಯಕವಾಗಿದೆ.

-ಮೂರ್ತಿ, ಕೆ.ಕೆ.ಎನ್. ಶೆಟ್ಟಿ