ಮಡಿಕೇರಿ, ಜು. ೫: ಅದೊಂದು ಶಕ್ತಿ ಕೇಂದ್ರವಾಗುತ್ತೆ.., ಒಂದೇ ಸೂರಿನಡಿ ತಾಲೂಕು ಆಡಳಿತ ನೆಲೆ ನಿಲ್ಲುತ್ತೆ.., ಸಾರ್ವಜನಿಕರಿಗೆ ಪ್ರಯೋಜನವಾಗುತ್ತೆ ಎಂಬೆಲ್ಲ ಕನಸು ಇದೀಗ ಮರೀಚಿಕೆಯಾಗಿದೆ. ಹೌದು. ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ನಲ್ಲಿ ಹಿಂದಿನ ಸರಕಾರವಿದ್ದ ಸಂದರ್ಭದಲ್ಲಿ ರೂ. ೫ ಕೋಟಿ ವೆಚ್ಚದಲ್ಲಿ ಮಿನಿವಿಧಾನ ಸೌಧ ಕಾಮಗಾರಿಗೆ ಯೋಜನೆ ರೂಪಿಸಿತು. ಜಿಲ್ಲಾ ಕೇಂದ್ರ ಮಡಿಕೇರಿಯ ತಹಶೀಲ್ದಾರ್ ಕಚೇರಿ ಸೇರಿದಂತೆ ಇನ್ನಿತರ ಇಲಾಖೆಗಳು ಇಲ್ಲಿ ಕಾರ್ಯಾರಂಭ ಇಷ್ಟೊತ್ತಿಗೆ ಮಾಡಬೇಕಾಗಿತ್ತು. ಆದರೆ, ಅನುದಾನ ಕೊರತೆಯಿಂದ ಇದೀಗ ಮಿನಿ ವಿಧಾನಸೌಧ ಅರೆಬರೆಯಾಗಿದ್ದು, ಉಳಿದ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ತಾಲೂಕು ಕಚೇರಿ ಕಿಷ್ಕಿಂಧೆಯAತಿದ್ದು, ವಾಹನ ನಿಲುಗಡೆಗೂ ಕಷ್ಟಕರವಾಗಿದೆ. ಹೊಸ ಯೋಜನೆಯಿಂದ ಸುಂದರ ತಾಲೂಕು ಆಡಳಿತ ಸೃಷ್ಟಿಯಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಕಂದಾಯ ಸಚಿವ ಆರ್. ಅಶೋಕ್ ಅವರು ಈ ಬಗ್ಗೆ ಗಮನಹರಿಸಬೇಕಾಗಿದೆ ಎಂಬುದು ಜನರ ಒತ್ತಾಯವಾಗಿದೆ.
ತಾ.೬ರಂದು (ಇಂದು) ಕೊಡಗು ಜಿಲ್ಲೆಗೆ ಆಗಮಿಸಲಿರುವ ಕಂದಾಯ ಸಚಿವರು ಯೋಜನೆಯ ಬಗ್ಗೆ ಮಾಹಿತಿ ಪಡೆದು ಸಮಸ್ಯೆಗೆ ಪರಿಹಾರ ಕಾಣಿಸಬೇಕಾಗಿದೆ. ಈ ಸಂಬAಧ ಸ್ಥಳೀಯ ಶಾಸಕರು ಸಚಿವರ ಗಮನ ಸೆಳೆಯಬೇಕಾಗಿದೆ.
ಒಟ್ಟು ೧.೭೫ ಎಕರೆಯಲ್ಲಿ ನಡೆಯುತ್ತಿದ್ದ ಮಿನಿ ವಿಧಾನಸೌಧ ಕಾಮಗಾರಿ ಸ್ಥಗಿತಗೊಂಡಿದೆ. ರೂ.೫ ಕೋಟಿ ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿ ನಡೆದಿದ್ದು, ಉಳಿದ ಕಾಮಗಾರಿಗೆ ಇನ್ನೂ ರೂ. ೫ ಕೋಟಿಯ ಅನುದಾನದ ಅಗತ್ಯತೆ ಇದೆ. ಅದಲ್ಲದೆ ಯೋಜನೆ ರೂಪಿಸುವ ಮೊದಲು ಒಟ್ಟು ರೂ.೫ ಕೋಟಿ ಬೇಕೆಂದು ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಆದರೆ, ಕಾಮಗಾರಿಗೆ ಇನ್ನೂ ಹೆಚ್ಚಿನ ಅನುದಾನದ ಅನಿವಾರ್ಯತೆ ಎದುರಾಯಿತು. ಇದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಉಳಿದ ಕಾಮಗಾರಿಗೆ ಸಲ್ಲಿಸಿರುವ ರೂ. ೫ ಕೋಟಿ ಪ್ರಸ್ತಾವನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಅನುದಾನ ಬಿಡುಗಡೆಗೊಳಿಸಬೇಕಾಗಿದೆ ಎಂಬುದು ನಾಗರಿಕÀರ ಆಗ್ರಹವಾಗಿದೆ .
- ಹೆಚ್.ಜೆ. ರಾಕೇಶ್