ಮಡಿಕೇರಿ, ಜು. ೫: ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ, ವಹಿವಾಟಿಗೆ ಅನುಕೂಲವಾಗುವಂತೆ ಕೊಡಗು ಜಿಲ್ಲೆಯಲ್ಲಿ ಮಧ್ಯಾಹ್ನ ೨ ಗಂಟೆವರೆಗೆ ಇರುವ ಲಾಕ್ಡೌನ್ ಸಡಿಲಿಕೆ ಸಮಯವನ್ನು ಸಂಜೆ ೬ ಗಂಟೆಯವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಚೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿಯಾದ ನಿಯೋಗ ವ್ಯಾಪಾರೋದ್ಯಮಿಗಳು ಹಾಗೂ ಸಣ್ಣ ವರ್ತಕರು ಎದುರಿಸುತ್ತಿರುವ ಕಷ್ಟ, ನಷ್ಟಗಳನ್ನು ವಿವರಿಸಿದರು.
ಬೆಳಿಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆವರೆಗೆ ಲಾಕ್ಡೌನ್ ಸಡಿಲಿಕೆ ಮಾಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಹೊಟೇಲ್, ಲಾಡ್ಜ್, ರೆಸಾರ್ಟ್ಗಳಲ್ಲಿ ಶೇ. ೫೦ ಮಂದಿಗೆ ಅವಕಾಶ ಕಲ್ಪಿಸಬೇಕು. ಚಿನ್ನ, ಬೆಳ್ಳಿ, ಬಟ್ಟೆ, ಮೊಬೈಲ್, ಸ್ಟುಡಿಯೋ, ಚಿಲ್ಲರೆ ಅಂಗಡಿಗಳು, ಲಾಡ್ಜ್, ಬಾರ್, ರೆಸ್ಟೋರೆಂಟ್ಗಳನ್ನು ಅವಲಂಬಿಸಿರುವವÀರ ಅನುಕೂಲಕ್ಕಾಗಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿದಿನ ಬೆಳಿಗ್ಗೆ ೬ ರಿಂದ ಸಂಜೆ ೬ ಗಂಟೆವರೆಗೆ ವ್ಯಾಪಾರ, ವಹಿವಾಟಿಗೆ ಸಮಯ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಕೋವಿಡ್ ಲಾಕ್ಡೌನ್ ಕಾರಣದಿಂದ ಕಳೆದ ೭೦ ದಿನಗಳಿಂದ ಕೊಡಗಿನ ವರ್ತಕ ಸಮುದಾಯ ಆರ್ಥಿಕ ಹಿನ್ನಡೆಯಿಂದ ಶೋಚನೀಯ ಸ್ಥಿತಿಗೆ ತಲುಪಿದೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. ೪ ರಿಂದ ೬ರ ಆಸುಪಾಸಿನಲ್ಲಿದ್ದು, ಲಾಕ್ಡೌನ್ ಸಡಿಲಿಕೆಗೆ ಅಡ್ಡಿಯಾಗುವುದಿಲ್ಲವೆಂದು ಪ್ರಮುಖರು ಅಭಿಪ್ರಾಯಪಟ್ಟರು.
ಸೋಂಕಿತರು ಇರುವ ಸ್ಥಳಗಳನ್ನು ಮಾತ್ರ ಕಂಟೈನ್ಮೆAಟ್ ಜೋನ್ ಎಂದು ಮಾಡಿ ಬಾಕಿ ಪ್ರದೇಶದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವರಿಕೆ ಮಾಡಿದರು.
ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ವರ್ತಕರ ಪರಿಸ್ಥಿತಿ ಅರ್ಥವಾಗಿದ್ದು, ಇನ್ನು ಒಂದು ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಚೇಂಬರ್ ಜಿಲ್ಲಾಧ್ಯಕ್ಷ ಎಂ.ಬಿ. ದೇವಯ್ಯ, ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ಲು, ಖಜಾಂಚಿ ರವಿಉತ್ತಪ್ಪ, ಸಂಘಟನಾ ಕಾರ್ಯದರ್ಶಿ ಮೋಂತಿ ಗಣೇಶ್, ಮಾಜಿ ಅಧ್ಯಕ್ಷ ಗಿರೀಶ್ ಗಣಪತಿ, ನಿರ್ದೇಶಕ ಕಾಶಿ ಕಾವೇರಪ್ಪ, ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಖಜಾಂಚಿ ಭಾಸ್ಕರ್, ಪ್ರಮುಖರಾದ ಜೆ.ವಿ. ಕೋಟಿ, ನಾಸಿರ್, ಅಮೃತ್ ರಾಜ್, ಜಹೀರ್ ಅಹಮ್ಮದ್ ಮತ್ತಿತರರು ನಿಯೋಗದಲ್ಲಿದ್ದರು.