*ಗೋಣಿಕೊಪ್ಪ, ಜು. ೪: ಐದು ಲಕ್ಷ ಜಿ.ಪಂ. ಅನುದಾನದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಿರ್ಮಾಣವಾದ ಇಲ್ಲಿನ ಕಾಳಪ್ಪ ಕಾಲೋನಿ ರಸ್ತೆ ಡಾಂಬರೀಕರಣ ಕಳಪೆಯಿಂದ ಕೂಡಿದೆ ಎಂದು ಈ ಭಾಗದ ನಿವಾಸಿಗಳು ಆರೋಪಿಸಿದ್ದಾರೆ.

ಕಳೆದ ಗ್ರಾ.ಪಂ. ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ ಗುತ್ತಿಗೆದಾರ ಕಳಪೆ ಗುಣಮಟ್ಟದ ಡಾಂಬರೀಕರಣ ಮಾಡಿದ್ದಾರೆ. ಇದರಿಂದ ರಸ್ತೆಯ ೧೫ಕ್ಕೂ ಹೆಚ್ಚು ಭಾಗಗಳಲ್ಲಿ ಡಾಂಬರು ಕಿತ್ತು ಹೋಗಿದೆ. ಕಿತ್ತು ಹೋದ ರಸ್ತೆಯ ಭಾಗಗಳಿಗೆ ಕಳೆದ ಎರಡು ದಿನಗಳ ಹಿಂದೆ ಮರು ತೇಪೆ ಕಾರ್ಯ ನಡೆಸಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ರಸ್ತೆ ಡಾಂಬರೀಕರಣ ಕಿತ್ತು ಹೋಗಿದೆ ಎಂದು ತಿಳಿದ ಗುತ್ತಿಗೆದಾರ ಮತ್ತೆ ಕಿತ್ತುಹೋದ ರಸ್ತೆಯ ಮೇಲೆ ಮರುಡಾಂಬರೀಕರಣ ಮಾಡುವ ಮೂಲಕ ಎರಡನೇ ಬಾರಿಗೂ ಕಳಪೆ ಕಾಮಗಾರಿಯನ್ನು ಪ್ರದರ್ಶಿಸಿದ್ದಾರೆ. ಈ ಭಾಗದ ಜನತೆ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಂಬAಧಪಟ್ಟವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ಒತ್ತಾಯಿಸಿದ್ದಾರೆ.