*ಗೋಣಿಕೊಪ್ಪ, ಜು. ೪: ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು.
ಪಾಲಿಬೆಟ್ಟ ಮಹಿಳಾ ಸಹಕಾರ ಸಮಾಜ ನಿಯಮಿತ ಕಟ್ಟಡದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಜನರಿಗೆ ಲಸಿಕೆ ಹೊಂದುವ ಅವಕಾಶವನ್ನು ರೋಟರಿ ಸಂಸ್ಥೆಯ ಕಾರ್ಯಕ್ರಮದಡಿಯಲ್ಲಿ ಶಾಸಕರು ಅವಕಾಶ ಕಲ್ಪಿಸಿದರು.
ರಾಜ್ಯ ಅನ್ಲಾಕ್ ಪ್ರಕ್ರಿಯೆಗೆ ತೆರೆದುಕೊಂಡಿದ್ದರೂ, ಕೊಡಗು ಮಾತ್ರ ಲಾಕ್ಡೌನ್ ನಿಯಮದಡಿಯಲ್ಲಿಯೇ ಇದೆ. ಇದಕ್ಕೆ ಸರ್ಕಾರ ಹೊಣೆಯಲ್ಲ ಜನರ ಬೇಜವಾಬ್ದಾರಿತನ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.
ಜನ ಸ್ವಯಂ ನಿಯಂತ್ರಣ ಹೊಂದದೆ ಕೋವಿಡ್ ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಮುಂದಿನ ೧೫ ದಿನಗಳೊಳಗೆ ಪ್ರತಿಯೊಬ್ಬರಿಗೂ ಲಸಿಕೆ ಪಡೆದುಕೊಳ್ಳಲು ಅವಕಾಶ ಸಿಗಲಿದೆ ಎಂದು ಹೇಳಿದರು.
ಪಾಲಿಬೆಟ್ಟದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿಕೆ ಕಾರ್ಯ ನಡೆಸಲಾಯಿತು. ಮಹಿಳಾ ಸಮಾಜದಿಂದ ಗಣಪತಿ ದೇವಸ್ಥಾನದವರೆಗೆ ಲಸಿಕೆ ಪಡೆಯಲು ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಲಸಿಕೆ ಪಡೆಯಲು ೩೦೦ ಜನರಿಗಷ್ಟೇ ಅವಕಾಶವಿತ್ತು. ಹೆಚ್ಚು ಜನರು ವ್ಯಾಕ್ಸಿನ್ ಪಡೆಯಲು ಮುಂದೆ ಬಂದಿರುವುದನ್ನು ಮನಗಂಡು ತಕ್ಷಣ ಹೆಚ್ಚುವರಿಯಾಗಿ ೩೦೦ ಲಸಿಕೆ ಪಡೆಯುವ ಅವಕಾಶ ಕಲ್ಪಿಸಿ ೬೦೦ ಜನರು ಲಸಿಕೆ ಹೊಂದಲು ಶಾಸಕರು ಅನುಕೂಲ ಕಲ್ಪಿಸಿದರು. ಶಾಸಕರ ಸಹಕಾರದೊಂದಿಗೆ ಮುಂದೆಯೂ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಲಸಿಕೆ ಹೊಂದಲು ಕರೆ ನೀಡಿ ಅಭಿಯಾನವನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಹಾಯಕ ರಾಜ್ಯಪಾಲ ಅನಿಲ್. ಎಚ್.ಟಿ. ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ನೇತೃತ್ವ ಮತ್ತು ಸಹಕಾರದೊಂದಿಗೆ ಪಾಲಿಬೆಟ್ಟ ಗ್ರಾ.ಪಂ. ಪಿ.ಡಿ.ಓ ವಿಶ್ವನಾಥ್ ಅವರ ನಿರ್ವಹಣೆಯಲ್ಲಿ ಕಾರ್ಯಕ್ರಮ ಶಿಸ್ತುಬದ್ದವಾಗಿ ನಡೆಯಿತು. ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿ ಜಪ್ಪೆಕೊಡಿ ಸುಭಾಷಿಣಿ, ವಲಯ ಸೇನಾನಿ ಆದಿತ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ, ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಹಿರಿಯರಾದ ಬಿದ್ದಂಡ ವಸಂತಮAದಣ್ಣ, ಹಲವು ಪ್ರಮುಖರು ಉಪಸ್ಥಿತರಿದ್ದರು.
-ಎನ್.ಎನ್. ದಿನೇಶ್