ಘಟನೆಯ ಸುತ್ತ ಅನುಮಾನದ ಹುತ್ತ

ಕೂಡಿಗೆ, ಜು. ೪: ಶಿರಂಗಾಲ ಗ್ರಾಪಂ ವ್ಯಾಪ್ತಿಯ ಮಣಜೂರಿನಲ್ಲಿ ವೃದ್ಧೆಯ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ. ವೃದ್ಧೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಶವ ಕೊಳೆತ ಸ್ಥಿತಿಯಲ್ಲಿ ದುರ್ವಾಸನೆಯಿಂದ ಕೂಡಿದೆ. ಮರಣೋತ್ತರ ಪರೀಕ್ಷೆ ಮುಂಚಿತವಾಗಿ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾ. ೩ ರಂದು ಮಣಜೂರಿನ ಗೌರಮ್ಮ (೮೩) ಸಾವೀಗಿಡಾಗಿದ್ದು, ಈ ಘಟನೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ವೃದ್ಧೆಯ ಎರಡು ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಬಿಗಿದು ಮುಖಕ್ಕೆ ಬಟ್ಟೆ ಸುತ್ತಿ ಥಳಿಸಿ ಕೊಲೆಗೈದಿದ್ದಾರೆ ಎಂದು ಶಂಕಿಸಿದ್ದು, ಬಳಿಕ ಮೃತ ವೃದ್ದೆಯ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿಟ್ಟು ಮನೆಯನ್ನು ಜಾಲಾಡಿರುವುದು ಕಂಡುಬAದಿದೆ. ಶ್ವಾನದಳ ಮನೆಯ ಸುತ್ತ ಒಂದು ಸುತ್ತು ಹಾಕಿದ್ದು ಯಾವುದೇ ಸುಳಿವು ಪತ್ತೆಯಾಗಿಲ್ಲ.

ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಮಡಿಕೇರಿಯ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಪ್ರಕರಣ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ತನಿಖೆ ಮುಂದುವರಿಸಲಾಗಿದೆ.