ಪೊನ್ನಂಪೇಟೆ, ಜು. ೪: ಪಾಲಿಬೆಟ್ಟದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ರಾಷ್ಟಿçÃಯ ವೈದ್ಯರ ದಿನಾಚರಣೆ ಅಂಗವಾಗಿ ಪಾಲಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ವೈದ್ಯ ಡಾ. ಸುಧಾಕರ್ ಶೆಟ್ಟಿ ಅವರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಪಾಲಿಬೆಟ್ಟ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಗೌರವಾಧ್ಯಕ್ಷ, ಜಿ.ಪಂ. ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಜನರ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಅತಿ ಮಹತ್ವದ್ದು. ವೈದ್ಯ ವೃತ್ತಿಗೆ ಸಮನಾದ ಮಾನವೀಯ ಸೇವೆ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೆ, ಡಾ. ಸುಧಾಕರ ಶೆಟ್ಟಿ ಅವರು ಕಳೆದ ಹಲವು ದಶಕಗಳಿಂದ ಪಾಲಿಬೆಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆಗೆ ನೀಡುತ್ತಿರುವ ವೈದ್ಯಕೀಯ ಸೇವೆ ಅನನ್ಯ ಎಂದು ಶ್ಲಾಘಿಸಿದರು.

ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ವೈದ್ಯರ ಸೇವೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೋವಿಡ್ ಅನ್ನು ಪ್ರತಿರೋಧಿಸಲು ವೈದ್ಯರ ಸಮೂಹ ತೋರಿದ ನಿಸ್ವಾರ್ಥ ಸೇವೆ ಈ ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುಧಾಕರ್ ಶೆಟ್ಟಿ ಅವರು, ಮಾನವೀಯತೆ ಮತ್ತು ಮನುಷ್ಯತ್ವ ಪ್ರತಿಯೊಬ್ಬರ ವೈದ್ಯರ ವೃತ್ತಿ ಧರ್ಮದ ಮೂಲ ಆಶಯವಾಗಿದೆ. ಸೇವೆಯನ್ನು ಗುರುತಿಸಿ ಮಾಡಲಾಗುವ ಪುಟ್ಟ ಸನ್ಮಾನಗಳು ಕೂಡ ವೃತ್ತಿ ಧರ್ಮದ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪವನ್, ಕಾರ್ಯದರ್ಶಿ ಹರೀಶ್, ಪ್ರಮುಖರಾದ ರಾಜು, ಗಣೇಶ್, ಅಬೂಬಕರ್, ವಿನೀತ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಆಟೋ ಚಾಲಕರು ಉಪಸ್ಥಿತರಿದ್ದರು.