ಸಿದ್ದಾಪುರ, ಜು. ೪: ಉರಗ ರಕ್ಷಣೆ ವೇಳೆ ಹಾವು ಕಚ್ಚಿ ಚಿಕಿತ್ಸೆಗೆ ಒಳಗಾಗಿದ್ದ ಉರಗ ರಕ್ಷಕನಿಗೆ ಕೊಡಗು ಸ್ನೇಕ್ ಮಾಸ್ಟರ್ ಗ್ರೂಪ್‌ನಿಂದ ನೆರವು ನೀಡಲಾಯಿತು.

ಮೂರು ತಿಂಗಳ ಹಿಂದೆ ಮನೆಯೊಂದರಲ್ಲಿ ನುಸುಳಿದ್ದ ವಿಷಪೂರಿತ ನಾಗರ ಹಾವೊಂದನ್ನು ಸೆರೆ ಹಿಡಿಯಲು ತೆರಳಿದ ಇಲ್ಲಿನ ನಿವಾಸಿ ಸ್ನೇಕ್ ರತನ್‌ಗೆ ಹಾವನ್ನು ಸೆರೆಹಿಡಿಯುವ ಸಂದರ್ಭ ಕೈಗೆ ಹಾವು ಕಚ್ಚಿದ್ದು ನಂತರ ಕಚ್ಚಿದ ಭಾಗದಲ್ಲಿ ಕೊಳೆಯುವುದಕ್ಕೆ ಪ್ರಾರಂಭವಾಗಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಯಿತು. ಇದರಿಂದ ರತನ್ ಕೆಲಸ ಮಾಡಲಾಗದ ಸ್ಥಿತಿಯಲ್ಲಿ ಇರುವುದರಿಂದ ಕೊಡಗಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕೊಡಗು ಸ್ನೇಕ್ ಮಾಸ್ಟರ್ ಸಂಘಟನೆಯ ಸದಸ್ಯರು ಇಂದು ಮನೆಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿದರು.

ಈ ಸಂದರ್ಭ ಮಾತನಾಡಿದ ಸಂಘದ ಸದಸ್ಯ ಸ್ನೇಕ್ ಸುರೇಶ್ ಉರಗ ಪ್ರೇಮಿಗಳು ಮನೆ, ಕಚೇರಿ, ಮುಂತಾದ ಕಡೆ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುವ ಮೂಲಕ ಉರಗಗಳ ರಕ್ಷಣೆ ಮಾಡುವ ಮೂಲಕ ಅರಣ್ಯ ಇಲಾಖೆಗೆ ಸಹಾಯ ಮಾಡುತ್ತಿದೆ. ಆದರೆ, ಈ ಸಂದರ್ಭದಲ್ಲಿ ಇಂತಹ ಅವಘಡಗಳು ಸಂಭವಿಸಿ ತಮ್ಮ ಬದುಕುಗಳಿಗೆ ಹಾನಿಯಾಗುತ್ತಿದ್ದು ರಕ್ಷಕರಿಗೆ ಅರಣ್ಯ ಇಲಾಖೆಯ ವತಿಯಿಂದ ಸಹಾಯ ಹಸ್ತ ನೀಡಬೇಕೆಂದು ಒತ್ತಾಯಿಸಿದರು.