ಗೋಣಿಕೊಪ್ಪಲು, ಜು. ೪: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಚ್ಚಿಮಾಡ ಹರೀಶ್ ಎಂಬವರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿಯಾಯಿತು.
ಬೆಳಿಗ್ಗೆ ೯ ಗಂಟೆಯ ವೇಳೆ ಹರೀಶ್ ಅವರ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಗುಂಪನ್ನು ಪತ್ತೆಹಚ್ಚಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಒಟ್ಟಾಗಿ ಕಾಡಾನೆಗಳನ್ನು ಓಡಿಸುವ ಕಾರ್ಯ ಆರಂಭಿಸಿದರು. ಗಾಳಿಯಲ್ಲಿ ಗುಂಡು ಹೊಡೆಯುತ್ತ, ಪಟಾಕಿ ಸಿಡಿಸಿ ಕಾಡಾನೆಗಳನ್ನು ಬೆದರಿಸಿ ಕಾಡಿಗಟ್ಟಲಾಯಿತು.
ಮಧ್ಯಾಹ್ನದ ವೇಳೆ ಕಾಡಾನೆಗಳ ಗುಂಪು ಪೊನ್ನಂಪೇಟೆ ಕಾಫಿ ಬೆಳೆಗಾರ ಚಿರಿಯಪಂಡ ಕಾಶಿಯಪ್ಪ ತೋಟದಲ್ಲಿ ನೆಲೆನಿಂತವು. ಸಂಜೆಯ ವೇಳೆ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಾಜಿ ಹೊಳೆಯ ಬದಿಯಲ್ಲಿ ವಿಶ್ರಾಂತಿ ಪಡೆದವು.
ಸಂಜೆ ೫ ಗಂಟೆಗೆ ತಿತಿಮತಿ ಅರಣ್ಯ ಪ್ರದೇಶಕ್ಕೆ ಮರಿಯಾನೆ ಸಹಿತ ಆರು ಕಾಡಾನೆಗಳ ಹಿಂಡನ್ನು ತಿತಿಮತಿ ಅರಣ್ಯದ ಮೂಲಕ ನಾಗರಹೊಳೆ ರಾಷ್ಟಿçÃಯ ಉದ್ಯಾನಕ್ಕೆ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾದರು.
ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ನಗರ ಪ್ರದೇಶದ ಕಾಡು, ರೈತರ ಗದ್ದೆ ಹಾಗೂ ಕಾಫಿ ತೋಟದಲ್ಲಿ ನೆಲೆನಿಂತು ನಾಗರಿಕರನ್ನು ಭಯಭೀತಗೊಳಿಸಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಸಿಸಿಎಫ್ ತಕ್ತ್ ಸಿಂಗ್ ರಾಣಾವತ್ ಅವರು ತಿತಿಮತಿಯಲ್ಲಿ ಆಯೋಜಿಸಿದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು.
ಈ ವೇಳೆ ತಿತಿಮತಿ ಅರಣ್ಯ ಅಧಿಕಾರಿಗಳಾದ ಪಿ.ಪಿ. ಉತ್ತಪ್ಪ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಸಭೆಯಲ್ಲಿ ನೀಡಿದ ಭರವಸೆಯಂತೆ ಕಾಡಾನೆಗಳ ಗುಂಪನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಮಾಡಿದ್ದಾರೆ.
ಎಸಿಎಫ್ ಪಿ.ಪಿ. ಉತ್ತಪ್ಪ ಅವರ ಮಾರ್ಗದರ್ಶನದಲ್ಲಿ ತಿತಿಮತಿ ಆರ್.ಎಫ್.ಓ. ಅಶೋಕ್ ಹುನಗುಂದ, ಪೊನ್ನಂಪೇಟೆ ವಲಯದ ಅಧಿಕಾರಿ ಗಳಾದ ದಿಡ್ಡಿಮಣಿ, ಸಿಬ್ಬಂದಿಗಳಾದ ಸುರೇಶ್ ಸಚಿನ್, ರೈತ ಮುಖಂಡರಾದ ಆಲೆಮಾಡ ಮಂಜುನಾಥ್, ಚೊಟ್ಟೆಕಾಳಪಂಡ ಮನು, ಪ್ರಕಾಶ್, ಪಡಿಞರಂಡ ಗಿರೀಶ್, ವಿಜಯ್ ಕುಮಾರ್, ಉತ್ತಪ್ಪ, ಮೂಕಳೇರ ಕುಶಾಲಪ್ಪ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿದ್ದರು.
ಪೊನ್ನಂಪೇಟೆ, ಕಿರುಗೂರು ರಸ್ತೆಗಾಗಿ ಕಾಡಾನೆಗಳು ದಾಟುವ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನಾಗರಿಕರು ತಮ್ಮ ಮೊಬೈಲ್ನಲ್ಲಿ ಕಾಡಾನೆಗಳ ಚಿತ್ರ ಸೆರೆಹಿಡಿದರು. ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು.
-ಹೆಚ್.ಕೆ. ಜಗದೀಶ್