ಗೋಣಿಕೊಪ್ಪಲು, ಜು. ೩: ಕಾಡಾನೆಗಳ ಹಿಂಡು ಮತ್ತೂರು ಗ್ರಾಮದ ರೈತರ ತೋಟದಲ್ಲಿ ಬೀಡು ಬಿಟ್ಟಿದ್ದು ಈ ಭಾಗದ ರೈತರು ಬೆಳೆದ ಬಾಳೆ, ಕಾಫಿ, ಅಡಿಕೆ, ತೆಂಗು ಗಿಡಗಳನ್ನು ಧ್ವಂಸ ಮಾಡಿದೆ. ಸುಮಾರು ೨೫ಕ್ಕೂ ಅಧಿಕ ಸಂಖ್ಯೆಯ ಕಾಡಾನೆಗಳು ಈ ಭಾಗದ ಕಾಫಿ ತೋಟಗಳಲ್ಲಿ ನೆಲೆಸಿವೆ. ಒಂದು ಕಾಫಿ ತೋಟದಿಂದ ಮತ್ತೊಂದು ತೋಟಕ್ಕೆ ಸ್ಥಳ ಬದಲಾವಣೆ ಮಾಡುತ್ತಿರುವ ಕಾಡಾನೆಗಳ ಹಿಂಡು ಮುಂಜಾನೆಯ ಸಮಯದಲ್ಲಿ ಸಮೀಪದ ದೇವರಕಾಡುವಿನಲ್ಲಿ ಆಶ್ರಯ ಪಡೆಯುತ್ತಿವೆ.

ಕಿರುಗೂರು ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ರೈತರಾದ ಗಿರೀಶ್ ಎಂಬುವರು ಬೆಳೆದಿದ್ದ ಬಾಳೆ ಫಸಲುಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಸಂಪೂರ್ಣ ಬೆಳೆ ನಾಶ ಮಾಡಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಾದ ಸ್ಥಿತಿ ಇವರದ್ದಾಗಿದೆ.

(ಮೊದಲ ಪುಟದಿಂದ) ಸಾಲ ಮಾಡಿ ಬಾಳೆ ಕೃಷಿ ಮಾಡಿದ ಗಿರೀಶ್ ಇದೀಗ ಫಸಲು ಆನೆಯ ಪಾಲಾಗಿರುವುದರಿಂದ ಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ೨೦ ದಿನಗಳ ಹಿಂದೆ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕ ಸಹಕಾರದಿಂದ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದರು.

ಈ ಕಾಡಾನೆಗಳ ಹಿಂಡು ಮತ್ತೆ ಅರಣ್ಯದಿಂದ ವಾಪಾಸ್ಸಾಗಿ ರೈತರ ತೋಟದಲ್ಲಿ ನೆಲೆ ನಿಂತಿರುವುದಾಗಿ ಇಲ್ಲಿನ ರೈತ ಮುಖಂಡ ಆಲೆಮಾಡ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಹಿಂಡು ನೆಲೆ ನಿಂತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ ಎಂದು ತಿತಿಮತಿ ವಲಯ ಅರಣ್ಯಧಿಕಾರಿ ಎಸಿಎಫ್ ಉತ್ತಪ್ಪ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಗ್ರಾಮದ ಜನರೊಂದಿಗೆ ಚರ್ಚಿಸಿ ಪೊನ್ನಂಪೇಟೆ ಹಾಗೂ ತಿತಿಮತಿ ವಲಯದ ಅರಣ್ಯ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರ ಪಡೆದು ಜಂಟಿ ಕಾರ್ಯಾಚರಣೆ ಮೂಲಕ ಕಾಡಾನೆಗಳ ಹಿಂಡನ್ನು ನಾಗರಹೊಳೆ ರಾಷ್ಟಿçÃಯ ಉದ್ಯಾನಕ್ಕೆ ಅಟ್ಟುವ ಕಾರ್ಯಾಚರಣೆ ಸದ್ಯದಲ್ಲಿಯೇ ಮಾಡುವುದಾಗಿ ಉತ್ತಪ್ಪ ತಿಳಿಸಿದರು. - ಹೆಚ್.ಕೆ. ಜಗದೀಶ್