ಕುಶಾಲನಗರ, ಜು. ೨: ಲಾಕ್‌ಡೌನ್ ನಡುವೆ ಕೊಡಗು ಜಿಲ್ಲೆಗೆ ಗಡಿಭಾಗದ ಮೂಲಕ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರು ವಲಸೆ ಬರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪ -ಕುಶಾಲನಗರ ಗಡಿಭಾಗದಲ್ಲಿ ಶುಕ್ರವಾರದಿಂದ ಕೋವಿಡ್ ಪರೀಕ್ಷಾ ಕೇಂದ್ರ ಆರಂಭಿಸಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಗೆ ಪ್ರವೇಶಿಸುವ ಹೊರ ರಾಜ್ಯಗಳ ಕಾರ್ಮಿಕರ ಸಂಖ್ಯೆ ಹೆಚ್ವಳವಾಗಿದ್ದು, ಇದನ್ನು ತಡೆಯಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊರಭಾಗದಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರ ಮಾಹಿತಿ ಸಂಗ್ರಹಿಸಿ ಅವರನ್ನು ಕೋವಿಡ್ ತಪಾಸಣೆ ಒಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ತಾಲೂಕಿನ ೫೦ ಕ್ಕೂ ಅಧಿಕ ಕಂದಾಯ ಇಲಾಖೆ ಸಿಬ್ಬಂದಿಗಳನ್ನು ವಿವಿಧೆಡೆ ತಪಾಸಣಾ ಕೇಂದ್ರದಲ್ಲಿ ನಿಯೋಜಿಸಲಾಗಿದ್ದು, ಶಿಕ್ಷಣ ಇಲಾಖೆ, ಪೊಲೀಸ್, ಹೋಂಗಾರ್ಡ್ಸ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಗಡಿಭಾಗದಲ್ಲಿ ದಿನದ ೨೪ ಗಂಟೆಗಳ ಕಾಲ ಜಿಲ್ಲೆಗೆ ಆಗಮಿಸುವ ಜನರ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಗೋವಿಂದ ರಾಜ್ ವಿವರ ನೀಡಿದ್ದಾರೆ.

ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಸೋಮವಾರಪೇಟೆ ತಾಲೂಕಿನ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಹೊರ ರಾಜ್ಯ ದಿಂದ ಬರುವ ಪ್ರತಿಯೊಬ್ಬರನ್ನೂ ಗಡಿ ಭಾಗದ ತಪಾಸಣಾ ಕೇಂದ್ರದಲ್ಲಿ ಕೋವಿಡ್ ತಪಾಸಣೆ ಕೈಗೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ. ವರದಿ ಆಧಾರದ ಮೇಲೆ ೧೪ ದಿನ ಕ್ವಾರಂಟೈನ್‌ಗೆ ಒಳಪಡಿಸಲು ತೋಟಗಳ ಮಾಲೀಕರಿಗೆ ಕಡ್ಡಾಯ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.