ಸಿದ್ದಾಪುರ, ಜು. ೨: ಗುಹ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಪಡಿಸಲಾದ ಕೊಠಡಿಯನ್ನು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಎಂ. ರಂಗನಾಥ ಭಟ್ ಉದ್ಘಾಟಿಸಿದರು.
ಗುಹ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಹಾಗೂ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು, ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯು ಶಾಲೆಯ ಹಳೆಯ ಮೇಲ್ಛಾವಣಿಯನ್ನು ಬದಲಿಸಿ, ದುರಸ್ತಿ ಮಾಡುವಲ್ಲಿ ಸಹಾಯ ಮಾಡಿತು. ಅಪಾಯದ ಸ್ಥಿತಿಯಲ್ಲಿದ್ದ ಕೊಠಡಿಗಳನ್ನು ಕೂಡ ದುರಸ್ತಿಗೊಳಿಸಿದ್ದು, ಮಂಗಳವಾರದAದು ಕೊಠಡಿಯ ಉದ್ಘಾಟನೆ ನಡೆಯಿತು. ಬಳಿಕ ಮಾತನಾಡಿದ ಎಂ. ರಂಗನಾಥ ಭಟ್, ರೋಟರಿ ಸಂಸ್ಥೆಯು ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಸಂಸ್ಥೆಯು ರಾಜ್ಯದ ವಿವಿಧ ಭಾಗದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಿದೆ ಎಂದರು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡುವ ಮೂಲಕ ಅಭಿವೃದ್ಧಿ ಪಡಿಸಿರುವ ಮಡಿಕೇರಿ ಮಿಸ್ಟಿ ಹಿಲ್ಸ್ ಸೇವಾಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭ ರೋಟರಿ ವಲಯ ಸಹಾಯಕ ರಾಜ್ಯಪಾಲ ಪಿ.ಕೆ. ರವಿ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ. ಸಂದೀಪ್, ಉಪಾಧ್ಯಕ್ಷ ಎಂ. ಧನಂಜಯ್, ಜಿಲ್ಲಾ ರೋಟರಿ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಿ.ಎಂ. ತಿಲಕ್, ರೋಟರಿ ಜಿಲ್ಲಾ ಯೋಜನಾ ಕಾರ್ಯದರ್ಶಿ ಆಸ್ಕರ್ ಆನಂದ್, ರೋಟರಿ ಜಿಲ್ಲಾ ಕಾರ್ಯದರ್ಶಿ ವಿಕ್ರಂದತ್ತ, ಜಿಲ್ಲಾ ರೋಟರಿ ಕಾರ್ಯಕ್ರಮ ನಿರ್ದೇಶಕ ರಿತೇಶ್ ಬಾಳಿಗ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಸತೀಶ್ ಸೋಮಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುತ್ತು, ಶಾಲಾ ಮುಖ್ಯ ಶಿಕ್ಷಕಿ ಪ್ರಸನ್ನಕುಮಾರಿ, ಶಿಕ್ಷಕರುಗಳಾದ ರಘು, ರಜಿನಿ, ಮಂಜುಳಾ ಸೇರಿದಂತೆ ಮತ್ತಿತರರಿದ್ದರು.