ಕಣಿವೆ, ಜು. ೧ : ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಗೆ ಭೇಟಿ ನೀಡಿದ ರಾಜ್ಯ ಸರ್ಕಾರದ ಯುವ ಜನ ಸೇವಾ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರನ್ನು ಶಾಲೆಯ ಒಳಾವರಣದಲ್ಲಿದ್ದ ಅಲಂಕಾರಿಕ ಗಿಡ ಆಕರ್ಷಿಸಿತು. ಬುಡದಿಂದ ಮೇಲ್ಮಟ್ಟಕ್ಕೆ ಸುರುಳಿಯಾಕಾರದಲ್ಲಿ ಹಬ್ಬಿಕೊಂಡು ಬೆಳೆಯುವ ಈ ಅಲಂಕಾರಿಕ ಗಿಡದ ಎಲೆಯನ್ನು ಮುಟ್ಟಿದ ಸಚಿವರು ಇದೇನು ಪ್ಲಾಸ್ಟಿಕ್ ಗಿಡಾನಾ...? ಎಂದು ಅಲ್ಲಿನ ಸಿಬ್ಬಂದಿಗಳನ್ನು ಕೇಳಿದಾಗ, ಇಲ್ಲ ಸರ್. ಅದು ಸ್ವಾಭಾವಿಕವಾದ ಅಲಂಕಾರಿಕ ಗಿಡ ಎಂದಾಗ, ನೋಡಿ ಎಷ್ಟೊಂದು ಅದ್ಭುತವಾಗಿದೆ ಎಂದು ಸಚಿವರು ನಕ್ಕರು.
ಸಚಿವರಿಗೆ ಶಾಲೆಯ ಅರೆಕಾಲಿಕ ಸಿಬ್ಬಂದಿಗಳು ವೇತನ ಹೆಚ್ಚಳಕ್ಕೆ ಮನವಿ ಮಾಡಿದರು. ಶಾಲೆಯಿಂದ ತೆರಳುವಾಗ ಕಂಡ ಶಾಲಾ ಡಿ ದರ್ಜೆ ಸಿಬ್ಬಂದಿಗಳನ್ನು ನೋಡಿದಾಗ ಮನ ಮಿಡಿದ ಸಚಿವರು ಅವರ ಕೈಗೆ ಒಂದಿಷ್ಟು ನಗದು ನೀಡಿದರು. ಬಳಿಕ ಮಂತ್ರಿ ಕೈಯಿಂದ ಹಣ ಪಡೆದುಕೊಂಡ ನಾವೇ ಧನ್ಯರು ಎಂದು ಡಿ ದರ್ಜೆ ನೌಕರರು ಧನ್ಯತೆಯಿಂದ ಬಾಗಿದರು.