ಸಿದ್ದಾಪುರ, ಜೂ. ೩೦: ಕಾಡುಕುರಿಯೊಂದು ತನ್ನ ಸಹಜವಾದ ವೇಗದ ಓಟದ ನಡುವೆ ಎದುರಿನ ಗೇಟ್‌ಗೆ ಅಪ್ಪಳಿಸಿ ಅಸು ನೀಗಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ನೆಲ್ಲಿಹುದಿಕೇರಿಯ ಬೆಟ್ಟದಕಾಡು ಭಾಗದಿಂದ ಮಡಿಕೇರಿಗೆ ತೆರಳುವ ಮುಖ್ಯ ರಸ್ತೆಯ ಮೂಲಕ ಅತೀವೇಗದಿಂದ ಬಂದ ಕಾಡುಕುರಿಯೊಂದು ರಸ್ತೆ ದಾಟುವ ಸಂದರ್ಭ ಗಾಬರಿಗೊಂಡು ನಿಯಂತ್ರಣತಪ್ಪಿ ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಮುಂಭಾಗದ ಕಬ್ಬಿಣದ ಗೇಟ್‌ಗೆ ಅಪ್ಪಳಿಸಿದೆ ಎನ್ನಲಾಗಿದ್ದು, ಇದರಿಂದ ಗಾಯಗೊಂಡಿದ್ದ ಕುರಿಯು ದೇವಾಲಯದ ಆವರಣದೊಳಗೆ ಬಿದ್ದು ಸಾವನ್ನಪ್ಪಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಮೀನುಕೊಲ್ಲಿ ವಿಭಾಗದ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ಕಾಡುಕುರಿಯನ್ನು ಚೆಟ್ಟಳ್ಳಿಯ ಪಶು ವೈದ್ಯಾಧಿಕಾರಿಯ ಮುಖಾಂತರ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಹೂತುಹಾಕಲಾಯಿತು. ಸಾವನ್ನಪ್ಪಿರುವ ಕಾಡುಕುರಿಗೆ ಅಂದಾಜು ೩ ವರ್ಷ ಪ್ರಾಯವಿರಬಹುದೆಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

- ಎ.ಎನ್. ವಾಸು.