ಕೂಡಿಗೆ, ಜೂ. ೩೦: ಉಪ ಕಾಲುವೆಯಿಂದ ಮನೆಗಳ ಗೋಡೆಗೆ ಹಾನಿ ಆಗುತ್ತಿರುವ ಪ್ರದೇಶಕ್ಕೆ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸೂಚನೆ ಮೇರೆಗೆ ಹಾರಂಗಿಯ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಕಣಿವೆ ಗ್ರಾಮದ ಮಮತ ಮಂಜುನಾಥ ಎಂಬವರ ಮನೆಯ ಗೋಡೆ ಹಾನಿಯಾಗುವ ಹಂತ ತಲುಪಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಉಪ ಕಾಲುವೆಯಲ್ಲಿ ಕಳೆದ ಬಾರಿ ಕಾವೇರಿ ನದಿಯ ನೀರಿನ ಹೆಚ್ಚುವರಿಯಿಂದಾಗಿ ಕಾಲುವೆ ಮತ್ತು ಮನೆಯ ಗೋಡೆ ಹಾಳಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ಉಪ ಕಾಲುವೆಯನ್ನು ಸರಿಪಡಿಸುವುದಾಗಿ ಮನೆಯವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಣಿವೆಯ ಗ್ರಾಮಸ್ಥರು ಇದ್ದರು. ಕಾಲುವೆಯಿಂದ ಮನೆಗಳ ಗೋಡೆಗೆ ಹಾನಿಯಾಗುತ್ತಿರುವ ಬಗ್ಗೆ ತಾ. ೨೪ರಂದು ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸ್ಪಂದಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.