*ಸಿದ್ದಾಪುರ ಜೂ. ೩೦ : ಚೆಟ್ಟಳ್ಳಿ, ಈರಳೆವಳಮುಡಿ, ಸಿದ್ದಾಪುರ, ವಾಲ್ನೂರು, ತ್ಯಾಗತ್ತೂರು ಸುತ್ತಮುತ್ತ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ತಕ್ಷಣ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕುವುದಾಗಿ ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಎಚ್ಚರಿಕೆ ನೀಡಿದ್ದಾರೆ.
ಚೆಟ್ಟಳ್ಳಿ ಮತ್ತು ಈರಳೆವಳಮುಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಒಳಗಾದ ಬೆಳೆಗಾರರ ತೋಟ, ಗದ್ದೆ ಹಾಗೂ ಮನೆಯಂಗಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಅರಣ್ಯ ಇಲಾಖೆ ಗ್ರಾಮೀಣ ಜನರ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿಲ್ಲ, ಕಳೆದ ೧೫ ವರ್ಷಗಳಿಂದ ಕಾಡಾನೆ ವಿರುದ್ಧ ಕಾರ್ಯಾಚರಣೆಗೆ ಮತ್ತು ಶಾಶ್ವತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದೇನೆ. ಆದರೆ ನನ್ನ ಒತ್ತಾಯಗಳೆಲ್ಲವೂ ಅರಣ್ಯ ರೋಧನವಾಗಿದೆ ಎಂದು ಆರೋಪಿಸಿದರು.
ಓಮ್ನಿಗೆ ಹಾನಿ
ಸ್ಥಳದಲ್ಲಿದ್ದ ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಕಂಠಿಕಾರ್ಯಪ್ಪ ಮಾತನಾಡಿ ಕಾಡಾನೆಗಳ ದಾಳಿಯಿಂದ ನಿತ್ಯ ನಷ್ಟ ಸಂಭವಿಸುತ್ತಿದ್ದು, ಅರಣ್ಯ ಇಲಾಖೆ ಜನರ ರಕ್ಷಣೆಯ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಟೀಕಿಸಿದರು.