ಈಗ್ಗೆ ಎಂಟತ್ತು ವರ್ಷಗಳಿಂದ ಆನೆ-ಮಾನವ ಸಂಘರ್ಷ ಎಂಬುದು ಕೊಡಗು ಜಿಲ್ಲೆಯಾದ್ಯಂತ ನಿತ್ಯನೂತನ ವಿಷಯವಾಗಿದೆ. ಜಿಲ್ಲೆಯ ಯಾವುದೇ ಭಾಗದಲ್ಲಿ ನೋಡಿದರೂ ಕಾಡಾನೆಗಳ ಉಪಟಳ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹಗಲು - ರಾತ್ರಿ ಎನ್ನದೆ ಕಾಡಾನೆಗಳು ನಿರ್ಭೀತಿಯಿಂದ ಸಂಚರಿಸುತ್ತಿ ರುವುದು ಇದೀಗ ಕಂಡು ಬರುತ್ತಿದೆ. ಅದರಲ್ಲೂ ಲಾಕ್ಡೌನ್ನಂತಹ ಇತ್ತೀಚಿನ ದಿನಗಳಲ್ಲಿ ಬಹುತೇಕ ಜಿಲ್ಲೆಯಲ್ಲಿ ಜನ, ವಾಹನಗಳ ಓಡಾಟದಿಂದ ಸ್ತಬ್ಧಗೊಳ್ಳುತ್ತಿದ್ದು, ಅವುಗಳ ನಿರಂತರ ಓಡಾಟಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲದೇ ಒಂದು ನಿರಾತಂಕ ಪರಿಸ್ಥಿತಿ ಏರ್ಪಟ್ಟಿರುವಂತೆ ಆಗಿಬಿಟ್ಟಿದೆ. ಕಾಡಿನಿಂದ ತೋಟಗಳಿಗೆ ಅವುಗಳ ಅಲೆದಾಟ ದಿನನಿತ್ಯದ ಕಾಯಕ ಎನ್ನುವಂತೆ ಆಗಿಬಿಟ್ಟಿದೆ.
ಈಗ ಇರುವ ಪರಿಸ್ಥಿತಿಯಂತೆ ಕಾಡಿನಲ್ಲಿ ಆನೆಗಳಿಗೆ ಬೇಕಾದಷ್ಟು ಆಹಾರ ದೊರೆಯದಿರುವುದೇ ಇದಕ್ಕೆಲ್ಲಾ ಕಾರಣ ಎನ್ನಬಹು ದಾಗಿದೆ. ಸ್ವಾಭಾವಿಕವಾಗಿಯೇ ಅವುಗಳು ಬೆಳೆಗಾರರ ತೋಟಗಳತ್ತ ಆಕರ್ಷಿತವಾಗುತ್ತಿವೆ.
ಅಂತೆಯೇ ಬೇಸಿಗೆಯಲ್ಲಿ ಕಾಡಿನಲ್ಲಿ ಅವುಗಳಿಗೆ ಬೇಕಾದ ಯಥೇಚ್ಚ ನೀರು ಕೂಡಾ ಲಭಿಸದೆ ಬೆಳೆಗಾರರ ಗದ್ದೆ, ತೋಟಗಳಲ್ಲಿ ಇರುವ ಕೆರೆಗಳತ್ತ ಧಾಂಗುಡಿ ಇಡುತ್ತಿವೆ. ತೋಟಗಳ ಲ್ಲಾದರೆ ಹಲಸು, ಬಾಳೆ, ತೆಂಗು, ಮಾವು, ಸೀಬೆಯಂತೆ ವಿವಿಧ ಜಾತಿಯ ಹಣ್ಣು ಹಾಗೂ ಸೊಪ್ಪು ಕೂಡಾ ಯಥೇಚ್ಚವಾಗಿ ಅವುಗಳಿಗೆ ದೊರೆಯುತ್ತಿದ್ದು, ತಮ್ಮ ಹೊಟ್ಟೆ ಹೊರೆದುಕೊಳ್ಳಲು ಸ್ವಾಭಾವಿಕ ವಾಗಿಯೇ ಆನೆಗಳು ಕಾಡನ್ನು ಬಿಟ್ಟು ತೋಟಗಳನ್ನು ತಮ್ಮ ಆಶ್ರಯ ತಾಣಗಳನ್ನಾಗಿ ಮಾಡಿಕೊಂಡಿವೆ.
ಇತ್ತೀಚಿನ ದಿನಗಳಲ್ಲಿ ಅವುಗಳ ಸಂಖ್ಯೆಯೂ ಯಥೇಚ್ಚವಾಗಿ ಹೆಚ್ಚಾಗಿದೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಆನೆಗಳ ಸಂಖ್ಯೆ ಈ ಪ್ರದೇಶದಲ್ಲಿ ಇರಬೇಕಾದುದಕ್ಕಿಂತಲೂ ಮಿತಿಮೀರಿ ಬೆಳೆದಿದೆ.
ನಮ್ಮ ಕಾಡಿನಲ್ಲಿ ನೈಜವಾದ ಕಾಡು ಎಂಬುದು ಎಲ್ಲಿದೆಯೋ ಅರಿಯದಾಗಿದೆ. ಕೇವಲ ಮುಖ್ಯ ರಸ್ತೆಯಿಂದ ಕಣ್ಣಳತೆಯ ದೂರದವರೆಗೆ ಮಾತ್ರ ಕಾಡಿನಂತೆ ಹಸಿರು ಕಂಗೊಳಿಸುತ್ತಿದೆ. ಇನ್ನಷ್ಟು ಒಳಭಾಗಕ್ಕೆ ಪ್ರವೇಶಿಸಿದರೆ ಎಲ್ಲಾ ಕೇವಲ ಬೋಳು, ಬೋಳು.
ಅಂತೆಯೇ ಹೊಳೆ, ತೋಡು, ಕೆರೆ ಮುಂತಾದವೆಲ್ಲಾ ಬೇಸಿಗೆಯಲ್ಲಿ ಬತ್ತಿಬರಡಾಗಿ ಮರಗಳು ಎಂಬುದೇ ಕಾಡಿನಲ್ಲಿ ಕಾಣ ದಂತಾಗಿದೆ. ಅರಣ್ಯ ಇಲಾಖೆ ಕಾಡಿನಲ್ಲಿ ಬೇಕಾದ ಹಣ್ಣಿನ ಮರಗಳನ್ನು ಬೆಳೆಸಿದ್ದರೆ ಈಗ ಇರುವಷ್ಟು ಆನೆ - ಮಾನವ ಸಂಘರ್ಷಕ್ಕೆ ಕಾರಣವೇ ಆಗುತ್ತಿರಲಿಲ್ಲ. ಅದರೊಂದಿಗೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಕಾಡಿನ ಬೆಂಕಿಯೂ ಸಹಜವಾಗಿಯೇ ಕಾಡಿನಲ್ಲಿ ಆನೆಗಳ ಆಹಾರ ಕೊರತೆಗೆ ಕಾರಣವಾಗುತ್ತಿದೆ. ಅಂತೆಯೇ ಕಳೆದ ಎಂಟತ್ತು ವರ್ಷಗಳ ಹಿಂದೆ ಬಿದಿರಿಗೆ ಬಾಧಿಸಿದ ‘ಕಟ್ಟೆರೋಗ’ವೂ ಆನೆಗಳ ಆಹಾರದ ತೀವ್ರ ಕೊರತೆಗೆ ಕಾರಣವಾಗಿ ಆನೆಗಳು ನಾಡಿನತ್ತ ಧಾಂಗುಡಿ ಇಡಲು ಬಲುದೊಡ್ಡ ಕಾರಣ. ಅವುಗಳು ಆಹಾರವಾಗಿ ಪ್ರೀತಿಸುವ ಬಿದಿರಿನ ಸೊಪ್ಪಿನ ಕೊರತೆಯೇ ಇಂದಿನ ಈ ಸ್ಥಿತಿಗೆ ಕಾರಣವೆಂದರೆ ಅತಿಶಯೋಕ್ತಿ ಯಂತೂ ಆಗುವುದಿಲ್ಲ.
ಇನ್ನೂ ಅರಣ್ಯ ಇಲಾಖೆಯವರ ಕಾಡು ಬೆಳೆಸುವ ಮಹತ್ಕಾರ್ಯ ವಂತೂ ಅಷ್ಟರಲ್ಲಿಯೇ ಇದೆ. ಇಷ್ಟೂ ವರ್ಷಗಳಲ್ಲಿ ಕಾಡಿನಲ್ಲಿ ಬಿದಿರು ಮತ್ತೆ ಹುಟ್ಟಿ ಬೆಳೆದಿರುವುದು ಕಂಡುಬರುತ್ತಲೇ ಇಲ್ಲ. ನೈಸರ್ಗಿಕವಾಗಿ ಅದು ಮತ್ತೆ ಹುಟ್ಟಿ ಬೆಳೆಯುತ್ತದೆ ಎಂಬುದಾಗಿ ಅರಣ್ಯ ಅಧಿಕಾರಿಯೊಬ್ಬರು ಪ್ರತಿಪಾದಿಸಿದರಂತೆ, ಹಾಗಾಗಿ ಇಲಾಖೆ ಬಿದಿರಿನ ಬೀಜ ಬಿತ್ತನೆಗೆ ಅಂದು ಮುಂದಾಗಲೇ ಇಲ್ಲ!
ಅಂತೆಯೇ ವಿವಿಧ ಸಂಘ-ಸAಸ್ಥೆಗಳು ಅರಣ್ಯ ಇಲಾಖೆಯೊಂದಿಗೆ ಸೇರಿ ಕಾಡು ಬೆಳೆಸುವ ಕಾರ್ಯಕ್ಕೆ ಮುಂದಾದರೂ ಅದೂ ಗುರಿ ಸೇರುವತ್ತ ನಡೆಯಲಿಲ್ಲ ಎಂಬುದು ಕಂಡುಬರುತ್ತಿದೆ.
ಇನ್ನು ಇತ್ತೀಚೆಗೆ ಜಿಲ್ಲೆಯಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವುದು ಎಂಬುದಾಗಿ ನಡೆಯುತ್ತಿರುವ ಕಾರ್ಯಾಚರಣೆ ಕೇವಲ ಒಂದು ಪ್ರಹಸನದಂತೆ ಭಾಸವಾಗುತ್ತಿದೆ. ಒಬ್ಬ ಬೆಳೆಗಾರ ದೂರು ನೀಡಿದರೆ ಕಾಟಾಚಾರಕ್ಕೆ ಅವರ ತೋಟದಿಂದ ಆನೆಗಳನ್ನು ಒಂದಷ್ಟು ದೂರ ಓಡಿಸಿ ಮತ್ತೊಬ್ಬರ ತೋಟಕ್ಕೆ ಬಿಟ್ಟು ಮರುಳುವುದೊಂದೇ ಇದೀಗ ನಡೆಯುತ್ತಿರುವ ಕಾರ್ಯಾಚರಣೆ.
ಇಲಾಖೆಯವರು ಮತ್ತು ಅವರ ವಾಹನಗಳು ರಾಜಾ ರಸ್ತೆಯಲ್ಲಿ ಹೂಂಕರಿಸುತ್ತಾ ಓಡಾಡುತ್ತಿರುವುದನ್ನು ಕಂಡರೆ ಮಾತ್ರ ಅದೇನೊ ಯುದ್ಧ ಸನ್ನದ್ಧ ರೀತಿಯಲ್ಲಿ ಬಂದAತೆ ಭಾಸವಾಗುತ್ತದೆ. ಆದರೆ ಅವರು ಸಿಡಿಸುವ ಠುಸ್ ಪಟಾಕಿಗಳಿಗೆ ಆನೆಗಳು ಇದೀಗ ಒಗ್ಗಿಹೋದಂತೆ ವರ್ತಿಸಲಾರಂಭಿಸಿವೆ. ಹಾಗಾಗಿ ಆ ಬೆದರು ಶಬ್ದಗಳಿಗೆ ಆನೆಗಳು ಕ್ಯಾರೆ ಎನ್ನದ ಪರಿಸ್ಥಿತಿ ನಿರ್ಮಾಣವಾಗಿ ಹೋಗಿದೆ.
ಇತ್ತೀಚೆಗೆ ಗೋಣಿಕೊಪ್ಪಲು ಪಟ್ಟಣದ ಅತೀ ಸಮೀಪದ ಅರುವತೋಕ್ಲಿನಲ್ಲಿ ಮುಂಜಾನೆ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಂ iೆÆಬ್ಬರನ್ನು ಆನೆ ಕೊಂದುಹಾಕಿತ್ತು. ಅಂತೆಯೇ ಮಾರನೇ ದಿನ ಆ ಆನೆಗಳನ್ನು ಕಾಡಿಗಟ್ಟುವ ಇಲಾಖಾ ಪ್ರಹಸನ ನಡೆಯಿತು.
ಅಲ್ಲಿಂದ ಓಡಿಸಿಕೊಂಡು ಬಂದ ಆನೆಗಳ ಹಿಂಡನ್ನು ಮಧ್ಯೆ ಹರಿಯುವ ಕೀರೆಹೊಳೆಯನ್ನು ದಾಟಿಸಿ ಇತ್ತಕಡೆ ಬಾಳಾಜಿ - ಮಾಯಮುಡಿ ಗ್ರಾಮದ ಗ್ರಾಮಸ್ಥರ ಕಾಫಿ ತೋಟಗಳಲ್ಲಿ ಬಿಟ್ಟು ಇಲಾಖೆಯವರು ತೆರಳಿಯೇ ಬಿಟ್ಟರು. ಅಲ್ಲಿ ಅವರ ಕೆಲಸ ಮುಗಿದು ಇಲಾಖೆಯ ಬೇರೆ ರೇಂಜ್ಗೆ ಆನೆಗಳು ಸೇರಿದವು!
ಇದನ್ನೆಲ್ಲಾ ನೋಡಿದಾಗ ಅರಣ್ಯ ಇಲಾಖೆಯವರಲ್ಲಿಯೇ ಹೊಂದಾಣಿಕೆಯ ಮತ್ತು ಸಮನ್ವಯತೆಯ ಕೊರತೆ ಎದ್ದು ಕಾಣುತ್ತಲಿದೆ. ಇದೀಗ ಉದ್ಭವಿಸುವ ಪ್ರಶ್ನೆ ಏನೆಂದರೆ ಕೊಡಗು ಜಿಲ್ಲೆಯಾದ್ಯಂತ ಇಂತದೇ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆಯೇ ಎನ್ನುವುದು? ಅಲ್ಲದಿದ್ದರೆ ಇಂತಿಷ್ಟು ದಿನ ಈ ರೀತಿ ನಡೆಸಿದರ ಫಲಶ್ರುತಿ ಗೋಚರವಾಗುತ್ತಲೇ ಇಲ್ಲ.
ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ತೋಟಗಳಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿಯುತ್ತಲೇ ಇದೆ! ಓಡಿಸಿದ ಆನೆಗಳು ಕಾಡಿನಲ್ಲಿ ನೆಲೆಗೊಳ್ಳುತ್ತದಲ್ಲವೆ? ಅಲ್ಲಿ ನೆಲೆಗೊಳ್ಳಲು ಅವುಗಳಿಗೆ ಪೂರಕವಾದ ವಾತಾವರಣ ಇದ್ದರೆ ತಾನೇ ಕಾಡಾನೆಗಳು ನಾಡಿಗೆ ಬರದಂತೆ ತಡೆಯುವ ಕ್ರಮ - ಕ್ರಮಗಳೂ ನೀರಿಗೆ ಹೋಮ ಮಾಡಿದಂತೆ ಆಗಿಬಿಟ್ಟಿದೆ. ರೈಲ್ವೆ ಬ್ಯಾರಿಕೇಡ್ಗಳಿಂದ ನಿರ್ಮಿಸಿದ ಬೇಲಿಯೊಳಗಿನಿಂದಲೂ ನುಗ್ಗಿ ಬರುತ್ತಿವೆಯೆಂದರೆ ಸದಾ ನೋವುಂಡು ಸಾಯುತ್ತಿರು ವವರನ್ನು ದೇವರೇ ಕಾಪಾಡಬೇಕು.
- ಸಣ್ಣುವಂಡ ವಿಶ್ವನಾಥ್, ಬಾಳಾಜಿ.