ಕೊರೊನಾ ಮಾರಿ ಕರುಣಿಸಿದ ‘ಲಾಕ್‌ಡೌನ್' ರಜೆಯಿಂದ ಎರಡು ತಿಂಗಳುಗಳ ಕಾಲ ಸತತವಾಗಿ ಕೋಳಿ ಮಾಂಸ, ಕೋಳಿ ಮೊಟ್ಟೆ ವಿಶೇಷವಾದ ಹೊಸ ರುಚಿ ಆಹಾರ ತಿನಿಸುಗಳು ಮತ್ತು ‘ಕೆಂಪುಎಣ್ಣೆ'ಯ ಸೇವನೆ ಫಲವಾಗಿ ನನ್ನ ದೇಹ ಸಂಪತ್ತು ಗೊಬ್ಬರ ಹಾಕಿರುವ ‘ಶುಂಠಿ' ಬೆಳೆ ರೀತಿ ಸಮೃದ್ಧವಾಗಿ ಬೆಳೆಯಿತು...! ಹೊಟ್ಟೆಗಾತ್ರವು ವೃದ್ಧಿಸಿತ್ತು..! ಒಂದು ಖಾದಿ ಬಟ್ಟೆ ಧರಿಸಿದ್ದರೇ ಒಂದು ರಾಜಕಾರಣಿಯ ರೂಪ ನನಗೆ ಇರುತಿತ್ತು ! ಯಾವುದೇ ಕೆಲಸ ಇಲ್ಲದೇ ತಿನ್ನುತ್ತಾ ಕಾಲ ಕಳೆಯುತ್ತಿದ್ದ ಕಾರಣ, ನನಗೆ ಕುಳಿತಾಗ, ಮಲಗಿದಾಗ ‘ನಿದ್ರಾ' ದೇವತೆ ಓಡಿ ಬಂದು ಅಪ್ಪಿ ಮುದ್ದಾಡುತ್ತಿದ್ದಳು...! ಜೊತೆಗೆ ಹುಚ್ಚು ಹುಚ್ಚು ಕನಸುಗಳು...!

ಕನಸಿನಲ್ಲಿ ಹೆಂಡತಿ ಲಟ್ಟಣಿಗೆಯಿಂದ ಬಾರಿಸುತ್ತಿದ್ದರೇ ನನ್ನ ಹತ್ತಾರು ಪ್ರೇಯಸಿಗಳು ಪಾನಿಪೂರಿ - ಮಸಾಲೆ ದೋಸೆ ತಿನ್ನಿಸುತ್ತಾ ‘ಪ್ರೇಮಲೋಕ'ಕ್ಕೆ ಕರೆದುಕೊಂಡು ಹೋಗುತ್ತಿದ್ದರು...! ಇನ್ನೂ ರಾಜಕೀಯ ಕನಸುಗಳನ್ನು ಹೇಳುವುದೇ ಬೇಡಾ...! ಸರ್ವ ಪಕ್ಷದ ನಾಯಕರುಗಳು ನನ್ನನ್ನು ನೂತನ ಮುಖ್ಯಮಂತ್ರಿಯಾಗಿ ಮಾಡಲು ಹಲವು ತಂತ್ರ-ಮAತ್ರಗಳು ಮಾಡುತ್ತಿದ್ದರು...!!

ಅಂದು ರಾತ್ರಿ ಸುಮಾರು ಹನ್ನೆರಡು ಗಂಟೆ...! ಎಂದಿನAತೆ ನನ್ನ ಕನಸುಗಳಿಗೆ ‘ಗೊರಕೆ'ಯ ಸಂಗೀತ ಸಹ ಇತ್ತು...! ಆದರೆ ಈ ಕನಸಿನ ರಾಜಕೀಯ ಸಿನಿಮಾವನ್ನು ಪೂರ್ಣವಾಗಿ ನೋಡುವ ಭಾಗ್ಯ ನನಗೆ ದೊರೆಯಲಿಲ್ಲ..! ಹತ್ತಾರು ರಾಜಕೀಯ ನಾಯಕರುಗಳ ನಡುವೆ ‘ನಾನೇ ಮುಖ್ಯಮಂತ್ರಿ' ಎಂದು ನಾನು ಕೂಗಿದ್ದು ಮಾತ್ರ ನನಗೆ ನೆನಪು ಉಂಟು...! ನಂತರ ಕಣ್ಣು ತೆರೆದಾಗ ಮಂಚದ ಕೆಳಗೆೆ ಹಣ್ಣು ‘ಹಲಸಿನ ಕಾಯಿ' ಬಿದ್ದಂತೆ ಬಿದ್ದು ಬಿಟ್ಟಿದ್ದೆ..!

ಹೆಂಡತಿ ಸೌಮ್ಯ ಕೋಪದಿಂದ ಉಗ್ರ ರೂಪ ತಾಳಿ ನಿಂತಿದ್ದಳು..!

"ಥೂ... ಥೂ... ರಾತ್ರಿ ನೆಮ್ಮದಿಯಿಂದ ಮಲಗಲು ನೀವು ಬಿಡುವುದಿಲ್ಲ...! ಸುಮ್ಮನೆ ಕನಸಿನಲ್ಲಿ ಕೂಗಾಡುತ್ತಾ ನನ್ನ ಎಲ್ಲಾ ನೆಮ್ಮದಿ ಹಾಳು ಮಾಡುವ ಬದಲು, ಜಾರಕಿ ‘ಹುಳಿ' ರೀತಿ ಯಾವುದಾದರೂ, ಸಿ. ಡಿ. ಬಿಡುಗಡೆ ಮಾಡಿ ನನಗೆ ‘ರಾಜೀನಾಮೆ' ನೀಡಿ ಬಿಡಿ...!'' ಎಂದು ಮಧ್ಯರಾತ್ರಿಯಲ್ಲಿ ಮಹಾಪೂಜೆ ಮಾಡಿದಾಗ, ಒಂದು ವಿಷಯ ಬಿಡಿಸಿ ಹೇಳಿದೆ.

‘‘ಓ....ಸೌಮ್ಯ..., ಇಂದು ನಿನ್ನ ಗಂಡ ಕುಡುಕನಾಗಿ ಇಲ್ಲಿ ಬಿದ್ದಿರ ಬಹುದು...! ನಾಳೆ ಅದೃಷ್ಟ ಇದ್ದರೆ ರಾಜ್ಯದ ನೂತನ ಮುಖ್ಯಮಂತ್ರಿ..! ಆಗ ನೀನು ಮುಖ್ಯಮಂತ್ರಿಯ ಹೆಂಡತಿ...!'' ಎಂದು ಪುನಃ ಕನಸಿನ ಬಿತ್ತನೆ ಕೃಷಿ ಪ್ರಾರಂಭಿಸಿದೆ.

"ರೀ... ರೀ... ಕನಸು ಕಾಣಿ....! ಆದರೆ ಹುಚ್ಚು ಕನಸು ಕಾಣಬೇಡಿ..! ಈ ಕುರ್ಚಿ ನಿಮಗೆ ಸುಲಭವಾಗಿ ದೊರೆಯುವುದಿಲ್ಲ..! ಡಿಕೆಯಿಂದ ಶುರುವಾಗಿ ಎ ಯಿಂದ ಝೆಡ್ ತನಕ ನಾಯಕರು ಇದ್ದಾರೆ. ಜಮೀರ್ ಸಹ ಆ ಕುರ್ಚಿ ಹತ್ತಿರ ನಿಂತಿದ್ದಾರೆ ಹುಷಾರ್...!'' ಎಂದು ಸೌಮ್ಯ ರಾಜಕೀಯ ಚಿತ್ರಣವನ್ನು ವಿವರಿಸಿದಳು.

‘‘ಸೌಮ್ಯ..., ಒಂದು ಅದೃಷ್ಟದ ಆಟ..! ಆದರೆ ಕೆಲವೊಮ್ಮೆ ಅದೃಷ್ಟ ಕೈ ಕೊಟ್ಟರೆ, ಮಂತ್ರಿ ಸ್ಥಾನವು ಕೊರೊನಾದ

‘‘ಪಾಸಿಟಿವ್’’ ರೀತಿಯಾಗುತ್ತದೆ...! ‘‘ನೆಗೆÀಟಿವ್’’ ಬಂದರೇ....’’ ಎಂದು ಪುನಃ ಆಸೆ ಹುಟ್ಟಿಸತೊಡಗಿದೆ.

‘‘ನಿಮಗೆ ಈ ಕೊರೊನಾ ಕಾಲದಲ್ಲಿ ತಿಂದು ಮಲಗಿದ್ದರೆ ಸಾಕು...! ಆದರೆ ನಾನು....’’ ಎಂದು ಮಡದಿ ತನ್ನ ಸಂಕಟ ಪುರಾಣವನ್ನು ರಾಗವಾಗಿ ಹಾಡ ತೊಡಗಿದ್ದಳು.

‘‘ಸೌಮ್ಯ...., ನೀನು ಏನೇ ಹೇಳಿದರೂ ನಾನು ಮುಖ್ಯಮಂತ್ರಿಯಾಗಿಯೇ ಬಿಡುವೆ...! ಆಗ ಮಾತ್ರ ನಿನಗೆ ನನ್ನ ರಾಜಕೀಯ ಶಕ್ತಿ ತಿಳಿಯುವುದು...! ನನ್ನ ಹಿಂದೆ ಹಳ್ಳಿ ಹಕ್ಕಿ... ಸೈನಿಕ.... ಹುಳಿ....ಬೆಲ್ಲ... ಎಲ್ಲಾ ನಾಯಕರು ಉಂಟು...!’’ ಎಂದು ನುಡಿದೆ.

‘‘ರೀ.... ಮೊದಲು ಬಾಯಿ ಮುಚ್ಚಿಕೊಂಡು ಬಂದು ಮಲಗಿ... ನೀವು ಮುಖ್ಯಮಂತ್ರಿಯಾಗದೇ ಇದ್ದರೂ, ನಾನು ಮಾತ್ರ ಸದಾ ‘‘ಗೃಹ ಮಂತ್ರಿ’’...! ನಿಮ್ಮ ಯಾವುದೇ ಆಟ ನನ್ನ ಹತ್ತಿರ ನಡೆಯುವುದಿಲ್ಲ...! ನನಗೆ ಲಾಠಿ ಬೀಸಲು ಚೆನ್ನಾಗಿ ಗೊತ್ತು...!'' ಎಂದು ಮಡದಿ ನುಡಿದಾಗ, ವಿಧಿ ಇಲ್ಲದೇ ಮಂಚಕ್ಕೆ ಏರಿ ಕಂಬಳಿಯೊಳಗೆ ಸೇರಿದೆ...! ಆಗ ಪುನಃ ನಮ್ಮ ರಾಜಕೀಯ ನಾಯಕರುಗಳು ನನ್ನನ್ನು ಸಿ.ಎಂ. ಮಾಡಲು ಮಾಡುತ್ತಿರುವ ಹೊಸ ತಂತ್ರದ ಕನಸು ಕಾಣತೊಡಗಿತ್ತು..!!

-ಐಗೂರು ಮೋಹನ್‌ದಾಸ್, ಜಿ.

ಐಗೂರು