ವೀರಾಜಪೇಟೆ, ಜೂ. ೨೮: ಜೌಷಧಿಗಾಗಿ ಅಂಗಡಿಗೆ ತೆರಳಿದ್ದ ವೃದ್ಧೆಯ ಮೇಲೆ ಹಸುವೊಂದು ಹಾಯ್ದು ವೃದ್ಧೆ ದುರ್ಮರಣ ಹೊಂದಿದ ಘಟನೆ ಅಮ್ಮತ್ತಿಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಜವರಮ್ಮ (೭೮) ಜೌಷಧಿ ಅಂಗಡಿಗೆ ತೆರಳಿ ಜೌಷಧಿಗಳನ್ನು ಪಡೆದುಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಗುಡ್ ಶೆಪರ್ಡ್ ಖಾಸಗಿ ಶಾಲೆಯ ಸನಿಹ ಎದುರಿನಿಂದ ಬಂದ ಹಸು ವೃದ್ಧೆಯ ಮೇಲೆ ಹಾಯ್ದಿದೆ. ನೆಲದ ಮೇಲೆ ಬಿದ್ದ ವೃದ್ಧೆಯ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸ್ಥಳೀಯರು ಅಮ್ಮತ್ತಿ ಆಸ್ಪತ್ರೆಗೆ ದಾಖಲಿಸಿ ನಂತರದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ವೃದ್ಧೆ ಕೊನೆಯುಸಿರೆಳೆದಿದ್ದಾರೆ. ಮೃತರ ಮಗಳು ಹೆಚ್.ಆರ್. ಪಾರ್ವತಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.