ಮಡಿಕೇರಿ, ಜೂ. ೨೮: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಯ ಕೊರತೆಯಿಂದಾಗಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಸರಕಾರಗಳು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಎಂದು ಘೋಷಣೆ ಮಾಡುವುದಕ್ಕೆ ಸೀಮಿತವಾಗಿದೆಯೇ ಹೊರತು ಕೊಡಗು ಜಿಲ್ಲೆಯನ್ನು ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ. ತಾ. ೨೧ ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಾಗಿ ಘೋಷಣೆಯಾಗಿದ್ದರೂ ಜಿಲ್ಲೆಗೆ ಈ ಸಂಬAಧ ಲಸಿಕೆ ಸರಬರಾಜಾಗಲಿ, ಮಾರ್ಗಸೂಚಿಯಾಗಲಿ ಇನ್ನೂ ತಲುಪದೇ ಇರುವುದು ವಿಪರ್ಯಾಸ. ತಾ.೨೧ ರಿಂದ ಲಸಿಕೆ ನೀಡುವುದಾಗಿ ಘೋಷಣೆಯಾದರೂ ಜಿಲ್ಲೆಯಲ್ಲಿ ಕೇವಲ ಆದ್ಯತಾ ಗುಂಪುಗಳಿಗೆ ಲಸಿಕೆ ನೀಡುತ್ತಿರುವುದನ್ನು ಆಕ್ಷೇಪಿಸಿ ಬಲವಂತವಾಗಿ ಲಸಿಕೆ ಪಡೆದ ಘಟನೆಯೂ ನಡೆದಿತ್ತು. ಈ ಘಟನೆ ಬಳಿಕ ಅನಿವಾರ್ಯವಾಗಿ ಯಾವ ಮಾರ್ಗಸೂಚಿ ಇಲ್ಲದಿದ್ದರೂ, ಜನರ ಒತ್ತಡಕ್ಕೆ ಮಣಿದು ಇತರರಿಗೆ ಮೀಸಲಿಟ್ಟ ಲಸಿಕೆಗಳನ್ನು ಇದೀಗ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡುತ್ತಿರುವುದಾಗಿ ತಿಳಿದುಬಂದಿದೆ.

ಜಿಲ್ಲೆಗೆ ತಾ. ೨೭ ರಂದು ೨,೦೦೦ ಡೋಸ್ ಕೋವಿಶೀಲ್ಡ್, ಕೋವ್ಯಾಕ್ಸಿನ್ ಆಗಮಿಸಿದೆ. ಮಡಿಕೇರಿಯಲ್ಲಿನ ೩ ಲಸಿಕಾ ಕೇಂದ್ರಗಳಲ್ಲಿ ಪ್ರತಿ ದಿನ ೪೫೦, ಕುಶಾಲನಗರ ರೈತ ಭವನದಲ್ಲಿ ೫೦೦, ಗೋಣಿಕೊಪ್ಪ, ವೀರಾಜಪೇಟೆ, ಸೋಮವಾರಪೇಟೆ ನಗರ ವ್ಯಾಪ್ತಿಯಲ್ಲಿ ತಲಾ ೨೦೦ ರಷ್ಟು ಡೋಸ್‌ಗಳನ್ನು ಪ್ರತಿದಿನ ನೀಡುತ್ತಿದ್ದು, ಇಷ್ಟೇ ಕೇಂದ್ರಗಳಲ್ಲಿ ಅಂದಾಜು ೧೫೫೦ ಲಸಿಕೆ ಖರ್ಚಾಗುತ್ತಿದ್ದು,

(ಮೊದಲ ಪುಟದಿಂದ) ಉಳಿದ ೪೫೦ ಲಸಿಕಾ ಡೋಸ್‌ಗಳನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಕೆಲವೊಂದು ಆರೋಗ್ಯ ಕೇಂದ್ರಗಳಲ್ಲಿ ದಿನಕ್ಕೆ ಕೇವಲ ೨೦ ಡೋಸ್‌ಗಳು ಮಾತ್ರ ಲಭ್ಯವಿದ್ದು, ೫೦ ಕ್ಕೂ ಅಧಿಕ ಮಂದಿ ಸಾಲಿನಲ್ಲಿ ನಿಂತು ಲಸಿಕೆ ದೊರೆಯದೆ ಹಿಂತಿರುಗುತ್ತಿದ್ದಾರೆ.

ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿಂದು ಚೆಯ್ಯಂಡಾಣೆ, ಭಾಗಮಂಡಲಗಳಲ್ಲಿ ಮಾತ್ರ ಲಸಿಕೆ ನೀಡಲಾಯಿತು. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ೪೫೦ ಡೋಸ್ ಲಸಿಕೆ ನೀಡಲಾಗುತ್ತಿದೆ. ಆದರೆ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಪ್ರತಿನಿತ್ಯ ಲಸಿಕೆ ನೀಡಲು ಅಸಾಧ್ಯ. ಆದ್ದರಿಂದ ಆಯ್ದ ಗ್ರಾಮಗಳಿಗೆ ಮಾತ್ರ ಲಸಿಕೆ ಸರಬರಾಜು ಮಾಡಲಾಗುತ್ತಿರುವುದಾಗಿ ತಾಲೂಕು ಆರೋಗ್ಯ ಅಧಿಕಾರಿ ಚೇತನ್ ಅವರು ಮಾಹಿತಿ ನೀಡಿದ್ದಾರೆ.

ಲಸಿಕಾ ಕೇಂದ್ರಕ್ಕೆ ಆಗಮಿಸಿ ಬರಿಗೈಲಿ ತೆರಳಿದ ಸಾರ್ವಜನಿಕರು

ಸೋಮವಾರಪೇಟೆ: ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆಯಾಗದ ಹಿನ್ನೆಲೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಕಾರ್ಯ ಸ್ಥಗಿತಗೊಂಡಿತ್ತು. ಸೋಮವಾರದಂದು ಲಸಿಕಾ ಕೇಂದ್ರಕ್ಕೆ ಆಗಮಿಸಿದ ನೂರಾರು ಮಂದಿ ಬಾಗಿಲಿಗೆ ಬೀಗ ಹಾಕಿದ್ದ ಹಿನ್ನೆಲೆ ಬರಿಗೈಲಿ ಹಿಂತೆರಳಿದರು.

ಸೋಮವಾರಪೇಟೆ ಪಟ್ಟಣದ ಹೋಮಿಯೋಪತಿ ಆಸ್ಪತ್ರೆ, ಶಾಂತಳ್ಳಿ, ಆಲೂರುಸಿದ್ದಾಪುರ, ಬಿಳಿಗೇರಿ, ಮಾದಾಪುರ, ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿಯಲ್ಲೂ ಲಸಿಕೆ ನೀಡುವ ಕಾರ್ಯ ಸ್ಥಗಿತಗೊಂಡಿದ್ದರಿAದ ಲಸಿಕೆ ಪಡೆಯಲು ಉತ್ಸುಕರಾಗಿದ್ದ ಮಂದಿಗೆ ನಿರಾಸೆಯಾಯಿತು.

ಬೇಡಿಕೆಯಷ್ಟು ಲಸಿಕೆ ಪೂರೈಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದ್ದು, ಕಳೆದ ತಾ. ೨೬ರಂದು ಲಸಿಕೆ ನೀಡಿದ್ದನ್ನು ಹೊರತುಪಡಿಸಿದರೆ, ನಿನ್ನೆ ಮತ್ತು ಇಂದು ಲಸಿಕೆಯ ಅಲಭ್ಯತೆಯಿಂದ ಕೇಂದ್ರಗಳು ಬಂದ್ ಆಗಿದ್ದವು.

ಇಲ್ಲಿನ ಲಯನ್ಸ್ ಕ್ಲಬ್, ಹೋಂ ಸ್ಟೇ ಅಸೋಸಿಯೇಷನ್ ಹಾಗೂ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಸ್ಥಳೀಯ ಗೌಡ ಸಮಾಜದಲ್ಲಿ ೩೦೦ ಮಂದಿಗೆ ಇಂದು ಲಸಿಕೆ ನೀಡಲಾಯಿತು. ಹೀಗಾಗಿ ಹೋಮಿಯೋಪಥಿ ಸೆಂಟರ್‌ನಲ್ಲಿ ಲಸಿಕೆ ನೀಡಲು ಸಾಧ್ಯವಾಗಲಿಲ್ಲ.

ಈವರೆಗೆ ತಾಲೂಕಿನಲ್ಲಿ ೭೨ ಸಾವಿರ ಮಂದಿಗೆ ಲಸಿಕೆ ನೀಡಲಾಗಿದ್ದು, ಕೆಲವರಿಗೆ ಪ್ರಥಮ ಹಾಗೂ ಎರಡನೇ ಹಂತದ ಲಸಿಕೆ ನೀಡಿದ್ದರೆ, ಇನ್ನು ಕೆಲವರಿಗೆ ಒಂದನೇ ಹಂತದ ಲಸಿಕೆ ಮಾತ್ರ ನೀಡಲಾಗಿದೆ. ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಭ್ಯತೆಯ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದ್ದು, ತಾ. ೨೯ರಂದು ಲಸಿಕೆ ಬಂದರೆ ಮಾತ್ರ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಲಸಿಕೆ ಪಡೆದುಕೊಳ್ಳಿ ಎಂದು ತರಹೇವಾರಿ ಕ್ರಮಗಳ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೆವು. ಆ ಸಂದರ್ಭದಲ್ಲಿ ಸಾರ್ವಜನಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದ್ದರೂ ಯಾರೂ ಮುಂದೆ ಬರುತ್ತಿರಲಿಲ್ಲ. ಇದೀಗ ಲಸಿಕೆ ಕೊಡಿ ಎಂದು ಅವರೇ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಷ್ಟು ಲಭ್ಯವಿಲ್ಲ. ದಾಸ್ತಾನಿಟ್ಟಿದ್ದ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ. ಇನ್ನೇನಿದ್ದರೂ ಸರ್ಕಾರದಿಂದ ಬಂದರೆ ಮಾತ್ರ ನೀಡಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕಿನಲ್ಲಿ ಲಸಿಕೆ ಅಭಾವ: ಮಾಹಿತಿಯಿಲ್ಲದೇ ಅಲೆದಲೆದು ಸುಸ್ತಾದ ಸಾರ್ವಜನಿಕರು

*ವೀರಾಜಪೇಟೆ: ವೀರಾಜಪೇಟೆ ತಾಲೂಕಿನಲ್ಲಿ ಲಸಿಕಾ ಅಭಿಯಾನ ಪ್ರಾರಂಭದಿAದಲೂ ಸುಗಮವಾಗಿ ನಡೆದುಕೊಂಡು ಬಂದಿತ್ತು. ಆದರೆ ಇತ್ತೀಚೆಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಜಿಲ್ಲೆಗೆ ಸರಿಯಾಗಿ ಸರಬರಾಜು ಆಗದ ಕಾರಣ ನಿತ್ಯ ಜನರು ಲಸಿಕೆಗಾಗಿ ವೀರಾಜಪೇಟೆಯ ಪುರಭವನಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವುದು, ಕಾಯುವುದು ಮತ್ತೆ ಮನೆಗೆ ವಾಪಾಸು ಹೋಗುವುದು ನಡೆಯುತ್ತಿದೆ.

ಹಲವು ಹಿರಿಯ ನಾಗರಿಕರು ಕೋವಿಶೀಲ್ಡ್ ಪ್ರಥಮ ಡೋಸ್ ಪಡೆದು ೧೦೦ ದಿನಗಳು ಕಳೆದಿದ್ದರೆ ಮತ್ತು ಕೆಲವರಿಗೆ ೯೦ ದಿನಗಳು ಕಳೆದಿವೆ. ಅಲ್ಲದೇ ಹಳ್ಳಿಯಿಂದ ನಿತ್ಯ ಇಲ್ಲಿಗೆ ಬಂದು ಹೋಗಲು ವಾಹನ ವ್ಯವಸ್ಥೆ ಇಲ್ಲ. ತುಂಬಾ ಸಮಸ್ಯೆಯಾಗುತ್ತಿರುವುದಾಗಿ ನಾಗರಿಕರು ವಿಷಾಧ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಇಂದು ವೀರಾಜಪೇಟೆ ಲಸಿಕಾ ಕೇಂದ್ರದಲ್ಲಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರು, ಲಸಿಕೆ ಸಿಗದೇ ಪರದಾಡುತ್ತಿದ್ದ ಹಿರಿಯ ನಾಗರಿಕರ ಕಷ್ಟ ಗಮನಿಸಿ ಸ್ಥಳದಲ್ಲೇ ಫೇಸ್‌ಬುಕ್ ಲೈವ್ ಬರುವ ಮೂಲಕ ಜಿಲ್ಲಾಧಿಕಾರಿಗಳ ಹಾಗೂ ಸಂಬAಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಿದರು.

ಈ ಬಗ್ಗೆ ಪತ್ರಿಕ್ರಿಯಿಸಿದ ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಯತಿರಾಜ್, ಕೋವಿಶೀಲ್ಡ್ ಮೊದಲ ಡೋಸ್ ಇಲ್ಲ. ಎರಡನೇ ಡೋಸ್ ಕೂಡ ಜಿಲ್ಲೆಗೆ ಸಮರ್ಪಕವಾಗಿ ಸರಬರಾಜು ಆಗಿಲ್ಲ. ಎರಡು ದಿನಗಳ ಹಿಂದೆ ೨೦೦ ಕೋವ್ಯಾಕ್ಸಿನ್ ಲಸಿಕೆಗಳು ವೀರಾಜಪೇಟೆ ಲಸಿಕಾ ಕೇಂದ್ರದಲ್ಲಿ ಲಭ್ಯವಿತ್ತು. ಯಾವ ಲಸಿಕೆಗಳು, ಯಾವ ವಯಸ್ಸಿನವರಿಗೆ ಎಷ್ಟು ಲಭ್ಯವಿದೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಲಸಿಕಾ ಕೇಂದ್ರದ ಮುಂದೆ ಅಂಟಿಸಲು ಸೂಚಿಸಲಾಗಿದೆ. ಇನ್ನು ಮುಂದೆ ಸರಿಯಾದ ಮಾಹಿತಿ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಒಟ್ಟಾರೆಯಾಗಿ ಗ್ರಾಮಾಂತರ ಭಾಗದ ಜನರಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಪ್ರತಿದಿನ ಬಾಡಿಗೆ ವಾಹನಗಳಲ್ಲಿ, ಸ್ವಂತ ವಾಹನಗಳಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಸಂಜೆವರೆಗೂ ಕಾದು ಹಿಂದಿರುಗುವ ಸನ್ನಿವೇಶಗಳು ಮಾಮೂಲಿಯಾಗಿದೆ.