ಗೋಣಿಕೊಪ್ಪ, ಜೂ. ೨೮: ಕನ್ನಡ ಚಿತ್ರರಂಗಕ್ಕೆ ಕೊಡಗು ಮೂಲದ ಉದಯೋನ್ಮುಖ ನಟಿಯೊಬ್ಬರ ಆಗಮನ ಹೊಸ ಭರವಸೆಯನ್ನು ಮೂಡಿಸಿದೆ.

ಮೂಲತಃ ಕೊಡಗಿನ ಗೋಣಿಕೊಪ್ಪ ನಿವಾಸಿಯಾಗಿರುವ ಬಲ್ಲಚಂಡ ಅಕ್ಷಿತಾ ಬೋಪಯ್ಯ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡು ಸಿನಿಪ್ರಿಯರನ್ನು ಸೆಳೆಯುತ್ತಿದ್ದಾರೆ.

ಬೆಳ್ಳಿಪರದೆಯಲ್ಲಿ ಈಗಾಗಲೇ ಹಲವು ಚಲನಚಿತ್ರಗಳಲ್ಲಿ ನಟಿಸಿದ ಅನುಭವ ಪಡೆದ ಇವರು ೨೦೧೭ರಲ್ಲಿ ‘ರಿಯಲ್ ಪೊಲೀಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖಾತೆ ತೆರೆದಿದ್ದಾರೆ.

ಕೊಡಗಿನ ಬೆಡಗಿ ಅಕ್ಷಿತಾ ಈಗಾಗಲೇ ಅಂಬರೀಶ್, ಉಪೇಂದ್ರ, ನೀನಾಸಂ ಸತೀಶ್, ಚಿರಂಜೀವಿ ಸರ್ಜಾ, ವಿಕ್ರಂ ರವಿಚಂದ್ರ ಅವರೊಂದಿಗೆ ನಟಿಸಿದ್ದಾರೆ.

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಬಾಲ್ಯ ಸ್ನೇಹಿತೆಯಾಗಿ ಬಣ್ಣ ಹಚ್ಚಿಕೊಂಡು ದಿಗ್ಗಜ ಅಂಬರೀಶ್ ಅವರಿಂದ ಕನ್ನಡ ಚಿತ್ರರಂಗದ ನಾಯಕ ನಟಿ ಎಂದು ಭವಿಷ್ಯವಾಣಿಯ ಕರ್ಣಾನಂದ ಅನುಭವಿಸಿದ್ದಾರೆ. ಬ್ರಹ್ಮಚಾರಿ ಚಿತ್ರದಲ್ಲಿ ನಾಯಕ ಮದುವೆಯಾಗಲು ಬಯಸಿ ಹುಡುಗಿ ನೋಡುವ ಪದ್ಧತಿಯಲ್ಲಿ ಸಾಂಪ್ರದಾಯಿಕ ಮನೆಮಗಳು ಹುಡುಗಿಯಾಗಿ ಕಾಣಿಸಿಕೊಂಡು ಅಭಿನಯದ ಪ್ರೌಢತೆ ಮೆರೆದಿದ್ದಾರೆ.

ಉಪೇಂದ್ರ ಅವರ ಐ ಲವ್ ಯು, ಚಿತ್ರದಲ್ಲಿ ಉಪೇಂದ್ರ ಅವರ ಬಾಲ್ಯ ಸ್ನೇಹಿತೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಶಿವಾರ್ಜುನ ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಪಿ ೫ ಮತ್ತು ತ್ರಿವಿಕ್ರಮ ಚಿತ್ರಕ್ಕೆ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿ ನಟನೆಯ ಪ್ರತಿಭೆಯನ್ನು ಅರಳಿಸಿದ್ದಾರೆ. ಪುನಿತ್ ರಾಜ್‌ಕುಮಾರ್ ಅವರೊಂದಿಗೆ ಪೊತಾಸ್ ಜಾಹೀರಾತಿನಲ್ಲಿಯೂ ರೂಪದರ್ಶಿಯಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಸ್ಯಾಂಡಲ್‌ವುಡ್ ಅಲ್ಲದೆ ಟಾಲಿವುಡ್‌ನಲ್ಲಿ ಗಮನಸೆಳೆದಿರುವ ಇವರು ತಮಿಳಿನ ಅಳಾಗ್, ತೆಳಪ್ಪಂ, ಸುಮಂಗಲಿ, ಕಣ್ಣಾನೇ ಕಣ್ಣೇ ಎಂಬ ಧಾರಾವಾಹಿಗಳಲ್ಲಿ ಪ್ರಮುಖ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

- ಜಗದೀಶ್ ಜೋಡುಬೀಟಿ