*ಸಿದ್ದಾಪುರ, ಜೂ.೨೭ : ನೆಲ್ಯಹುದಿಕೇರಿ ಭಾಗದ ಮಳೆಹಾನಿ ಸಂತ್ರಸ್ತರಿಗಾಗಿ ಸಹಾಯ ಚಾರಿಟೇಬಲ್ ಟ್ರಸ್ಟ್ ೧೫ ಮನೆಗಳನ್ನು ನಿರ್ಮಿಸಿದೆ. ಜಾತ್ಯತೀತವಾಗಿ ಎಲ್ಲಾ ಜಾತಿ ಧರ್ಮದ ನಿರಾಶ್ರಿತರಿಗೆ ಆಶ್ರಯ ನೀಡಲು ಟ್ರಸ್ಟ್ ಮುಂದಾಗಿದೆ.
ಕಾವೇರಿ ನದಿ ಹರಿಯುವ ನೆಲ್ಯಹುದಿಕೇರಿ ಭಾಗದಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗುತ್ತಿದ್ದು, ಅನೇಕ ಮನೆಗಳು ಮುಳುಗಡೆಯಾಗುತ್ತವೆ. ನದಿತೀರದ ನಿವಾಸಿಗಳು ಪ್ರವಾಹ ಬಂದಾಗಲೆಲ್ಲಾ ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುತ್ತಾರೆ. ಮಳೆ ನಿಂತ ಮೇಲೆ ಮತ್ತೆ ಅದೇ ಮನೆಗಳಲ್ಲಿ ವಾಸ ಮಾಡುತ್ತಾರೆ. ಕಳೆದ ಮೂರು ವರ್ಷಗಳಿಂದ ಮಳೆ ಮತ್ತು ಪ್ರವಾಹದ ತೀವ್ರತೆ ಅತಿಯಾಗಿರುವುದರಿಂದ ಎಲ್ಲಾ ಕುಟುಂಬಗಳು ಶಾಶ್ವತವಾಗಿ ಇಲ್ಲಿಂದ ಸ್ಥಳಾಂತರಗೊಳ್ಳಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆದರೆ ಸಂತ್ರಸ್ತರಿಗೆ ಪರ್ಯಾಯ ನಿವೇಶನ ಅಥವಾ ಮನೆಗಳನ್ನು ನೀಡಲು ಇಲ್ಲಿಯವರೆಗೆ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಕೆಲವು ದಾನಿಗಳು ಹಾಗೂ ಸಂಘ, ಸಂಸ್ಥೆಗಳು ಮನೆ ಕಳೆದುಕೊಂಡವರ ನೆರವಿಗೆ ಬಂದಿವೆ. ನೆಲ್ಯಹುದಿಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎ.ಕೆ.ಹಕೀಂ ಅವರು ನೆಲ್ಯಹುದಿಕೇರಿ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಲು ಸಮೀಪದಲ್ಲೇ ಇರುವ ಬೆಟ್ಟದ ಕಾಡು ಪ್ರದೇಶದ ತಮ್ಮ ಸ್ವಂತ ಜಮೀನು ೧.೯೪ ಎಕರೆಯಷ್ಟನ್ನು ದಾನವಾಗಿ ನೀಡಿದ್ದಾರೆ.
ಸಹಾಯ ಚಾರಿಟೇಬಲ್ ಟ್ರಸ್ಟ್ ಮನೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು ನೆಲ್ಯಹುದಿಕೇರಿ ಗುತ್ತಿಗೆದಾರ ವಿಜೇಶ್ ಅವರ ಮೂಲಕ ೧೫ ಸುಸಜ್ಜಿತ ಮನೆಗಳನ್ನು ನಿರ್ಮಿಸಿದೆ. ಈ ಭಾಗದ ಜಿ.ಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಅವರು ತಾವು ಸದಸ್ಯರಾಗಿದ್ದಾಗ ಟ್ರಸ್ಟ್ನ ಬಡಾವಣೆಗೆ ಕುಡಿಯುವ ನೀರು, ರಸ್ತೆ ಮತ್ತು ವಿದ್ಯುತ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.
ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ೧೫ ಮನೆಗಳಿರುವ ಸಹಾಯ ಚಾರಿಟೇಬಲ್ ಟ್ರಸ್ಟ್ ನಿರ್ಮಾಣದ ಬಡಾವಣೆ ಉದ್ಘಾಟನೆಗೆ ಸಜ್ಜಾಗಿದೆ. ಎಲ್ಲಾ ಧರ್ಮೀಯರನ್ನೊಳಗೊಂಡ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ನದಿ ಪಕ್ಕದಲ್ಲೇ ಇದ್ದ ಕಡುಬಡ ನೈಜ ಫಲಾನುಭವಿಗಳನ್ನೇ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ನ ಪ್ರಮುಖರು ತಿಳಿಸಿದ್ದಾರೆ.
ಉಳಿದ ಸುಮಾರು ೪೦ ಕುಟುಂಬಗಳು ಜಿಲ್ಲಾಡಳಿತದ ಸಹಕಾರ ದೊರೆಯದೆ ಮತ್ತು ಸಂಘ ಸಂಸ್ಥೆಗಳ ನೆರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿವೆ. ಈ ಬಾರಿಯ ಮಳೆಗೆ ಮತ್ತೆ ಕುಟುಂಬಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ೧೫ ಮನೆಗಳನ್ನು ಪರಿಶೀಲಿಸಿದರು. ಕೋವಿಡ್ ಲಾಕ್‌ಡೌನ್ ಮುಗಿದ ನಂತರ ಉದ್ಘಾಟಿಸಿ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಟ್ರಸ್ಟ್ನ ಪ್ರಮುಖರು ಮಾಹಿತಿ ನೀಡಿದರು.
- ಅಂಚೆಮನೆ ಸುಧಿ